1. ನಾನು 2026ರ ಏಪ್ರಿಲ್ 1ರ ನಂತರ ಹೊಸ ಖಾಯಂ ಖಾತೆ ಸಂಖ್ಯೆ (PAN)ಗಾಗಿ ಅರ್ಜಿ ಸಲ್ಲಿಸಲು ಬಯಸುತ್ತೇನೆ. ನಾನು ಯಾವ ಫಾರ್ಮ್ಅನ್ನು ಬಳಸಬೇಕು?
2026ರ ಏಪ್ರಿಲ್ 1 ಅಥವಾ ಅದರ ನಂತರ ಹೊಸ ಖಾಯಂ ಖಾತೆ ಸಂಖ್ಯೆ (PAN) ಪಡೆಯಲು ಸಲ್ಲಿಸುವ ಅರ್ಜಿಗಳನ್ನು, ಆದಾಯ ತೆರಿಗೆ ನಿಯಮಗಳು, 2026ರ ಅಡಿಯಲ್ಲಿ ನಿಗದಿಪಡಿಸಲಾದ ಹೊಸ ಫಾರ್ಮ್ಗಳಲ್ಲಿ ಸಲ್ಲಿಸಬೇಕು.
2. 2026ರ ಮಾರ್ಚ್ 31ರ ವೇಳೆಗೆ ಬಾಕಿ ಉಳಿದಿರುವ PAN ಅರ್ಜಿಗಳ ಸ್ಥಿತಿ ಏನಾಗುತ್ತದೆ? ಅವು 2026ರ ಏಪ್ರಿಲ್ 1ರಿಂದ ಅಮಾನ್ಯವಾಗುತ್ತವೆಯೇ? ಹೊಸ ಕಾಯ್ದೆಯ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿದೆಯೇ?
31.03.2026ರಂತೆ ಬಾಕಿ ಇರುವ PAN ಹಂಚಿಕೆ ಅರ್ಜಿಗಳು ಮಾನ್ಯವಾಗಿಯೇ ಮುಂದುವರಿಯುತ್ತವೆ. ಹೊಸ ಕಾಯ್ದೆಯ ಅಡಿಯಲ್ಲಿ ಹೊಸ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.
3. ಹೊಸ ಫಾರ್ಮ್ ಗಳಿಂದ ಈಗಿರುವ PAN/TAN ಸಂಖ್ಯೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗುತ್ತದೆಯೇ?
ಇಲ್ಲ. ಈಗಿರುವ PAN/TAN ಸಂಖ್ಯೆಗಳು ಮಾನ್ಯವಾಗಿಯೇ ಇರುತ್ತವೆ ಮತ್ತು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಮುಂದುವರಿಯುತ್ತವೆ. ಹೊಸ ಫ಼ಾರ್ಮ್ಗಳು (93, 94, 95, 96, 134 ಮತ್ತು 135) 01.04.2026 ರಿಂದ ಅಥವಾ ಅದರ ನಂತರ ಸಲ್ಲಿಸುವ ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತವೆ.
4. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ, ನಿರ್ದಿಷ್ಟಪಡಿಸಿದ ಕೆಲವು ವ್ಯವಹಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ PAN ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿದೆ. ಆದರೆ, ಒಬ್ಬ ವ್ಯಕ್ತಿಯು PAN ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಅವರು ಫ಼ಾರ್ಮ್ ಸಂಖ್ಯೆ 60 ಅನ್ನು ಸಲ್ಲಿಸುವ ಮೂಲಕ ಅಂತಹ ವ್ಯವಹಾರಗಳನ್ನು ಕೈಗೊಳ್ಳಬಹುದು. ಆದಾಯ ತೆರಿಗೆ ಕಾಯ್ದೆ, 2025ರಲ್ಲಿಯೂ ಇದೇ ರೀತಿಯ ವ್ಯವಸ್ಥೆ ಲಭ್ಯವಿದೆಯೇ?
ಹೌದು. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ PAN ಸಂಖ್ಯೆಯನ್ನು ಹೊಂದಿರದ ವ್ಯಕ್ತಿಗಳು, ಆದಾಯ ತೆರಿಗೆ ನಿಯಮಗಳು, 2026ರ ನಿಯಮ 159(2)ರಲ್ಲಿ ನಿರ್ದಿಷ್ಟಪಡಿಸಿರುವ ವ್ಯವಹಾರಗಳನ್ನು ಫ಼ಾರ್ಮ್ ಸಂಖ್ಯೆ 97ರಲ್ಲಿ ಘೋಷಣೆಯನ್ನು ಸಲ್ಲಿಸುವ ಮೂಲಕ ಕೈಗೊಳ್ಳಬಹುದು. ಹೀಗಾಗಿ, ಹೊಸ ಕಾಯ್ದೆಯ ಅಡಿಯಲ್ಲಿ ಫ಼ಾರ್ಮ್ ಸಂಖ್ಯೆ 97, ಹಿಂದಿನ ಫ಼ಾರ್ಮ್ ಸಂಖ್ಯೆ 60 ಅನ್ನು ಬದಲಿಸುತ್ತದೆ. ಆದರೆ, ಹೊಸ ನಿಯಮ 159(2)ರಲ್ಲಿ ಉಲ್ಲೇಖಿಸಿರುವ ವ್ಯವಹಾರಗಳ ವ್ಯಾಪ್ತಿಯಲ್ಲಿ, ಆದಾಯ ತೆರಿಗೆ ನಿಯಮಗಳು, 1962ರ ನಿಯಮ 114B ಮತ್ತು 114BAರಲ್ಲಿ ಉಲ್ಲೇಖಿಸಿರುವ ವ್ಯವಹಾರಗಳಿಗೆ ಹೋಲಿಸಿದರೆ ಕೆಲವು ಬದಲಾವಣೆಗಳಿವೆ.
5. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ, ಫ಼ಾರ್ಮ್ ಸಂಖ್ಯೆ 60ರಲ್ಲಿ ಘೋಷಣೆಯನ್ನು ಸ್ವೀಕರಿಸಿದ ಪ್ರತಿಯೊಬ್ಬ ವ್ಯಕ್ತಿಯು ಆದಾಯ ತೆರಿಗೆ ಇಲಾಖೆಗೆ ಅರ್ಧವಾರ್ಷಿಕ ವಿವರವನ್ನು ಫ಼ಾರ್ಮ್ ಸಂಖ್ಯೆ 61ರಲ್ಲಿ ಸಲ್ಲಿಸಬೇಕಾಗಿತ್ತು. ಈ ಅವಶ್ಯಕತೆಯು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿಯೂ ಮುಂದುವರಿಯುತ್ತದೆಯೇ?
ಹೌದು. ಆದಾಯ ತೆರಿಗೆ ನಿಯಮಗಳು, 2026ರ ಅಡಿಯಲ್ಲಿ, ಫ಼ಾರ್ಮ್ ಸಂಖ್ಯೆ 97ರಲ್ಲಿ ಘೋಷಣೆಯನ್ನು ಸ್ವೀಕರಿಸುವ ಪ್ರತಿಯೊಬ್ಬ ವ್ಯಕ್ತಿಯು ಆದಾಯ ತೆರಿಗೆ ಇಲಾಖೆಗೆ ಅರ್ಧವಾರ್ಷಿಕ ವಿವರವನ್ನು ಫ಼ಾರ್ಮ್ ಸಂಖ್ಯೆ 98ರಲ್ಲಿ ಸಲ್ಲಿಸಬೇಕಾಗುತ್ತದೆ.
6. ಕಡಿಮೆ/ಶೂನ್ಯ ತೆರಿಗೆ ತಡೆಹಿಡಿಯುವಿಕೆ ಪ್ರಮಾಣಪತ್ರದ ಉದ್ದೇಶವೇನು ಮತ್ತು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಅದಕ್ಕೆ ಅನುಗುಣವಾದ ನಿಬಂಧನೆ ಯಾವುದು?
ಕಡಿಮೆ/ಶೂನ್ಯ ತೆರಿಗೆ ತಡೆಹಿಡಿಯುವಿಕೆ ಪ್ರಮಾಣಪತ್ರವು, ತೆರಿಗೆದಾರರ ಅಂದಾಜು ಒಟ್ಟು ಆದಾಯವು ಅದನ್ನು ಸಮರ್ಥಿಸಿದಲ್ಲಿ, ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಅಥವಾ ಶೂನ್ಯ ದರದಲ್ಲಿ TDS ಅನ್ನು ಕಡಿತಗೊಳಿಸಲು ಅನುಮತಿಸುತ್ತದೆ. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಈ ನಿಬಂಧನೆಯು ಸೆಕ್ಷನ್ 197ರಲ್ಲಿ ಒಳಗೊಂಡಿತ್ತು. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಇದಕ್ಕೆ ಅನುಗುಣವಾದ ನಿಬಂಧನೆಗಳು ಸೆಕ್ಷನ್ 395(1)ರಲ್ಲಿ ಒಳಗೊಂಡಿವೆ. ಮೂಲಭೂತ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ — ಪಾವತಿಯನ್ನು ಸ್ವೀಕರಿಸುವವರು (Payee) ಮೌಲ್ಯಮಾಪನ ಅಧಿಕಾರಿಗೆ (Assessing Officer) ಅರ್ಜಿ ಸಲ್ಲಿಸುತ್ತಾರೆ. ತೆರಿಗೆದಾರರ ಒಟ್ಟು ಆದಾಯವು ಕಡಿಮೆ ದರವನ್ನು ಸಮರ್ಥಿಸುತ್ತದೆ ಎಂದು ಅಧಿಕಾರಿಗೆ ತೃಪ್ತಿಯಾದಲ್ಲಿ, ಅವರು ಅದಕ್ಕೆ ಅನುಗುಣವಾಗಿ ಪ್ರಮಾಣಪತ್ರವನ್ನು ನೀಡುತ್ತಾರೆ.
7. ಹಳೆಯ ಕಾಯ್ದೆಯ ಸೆಕ್ಷನ್ 197ರ ಅಡಿಯಲ್ಲಿ ನೀಡಲಾದ ಕಡಿಮೆ/ಶೂನ್ಯ ತೆರಿಗೆ ತಡೆಹಿಡಿಯುವಿಕೆ ಪ್ರಮಾಣಪತ್ರವು 1 ಏಪ್ರಿಲ್, 2026ರಂದು ಅಥವಾ ಅದರ ನಂತರ ಮಾಡಲಾದ ಪಾವತಿಗಳು/ಜಮಾಗಳಿಗೆ ಮಾನ್ಯವಾಗಿರುತ್ತದೆಯೇ?
ಹೌದು. ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 197ರ ಅಡಿಯಲ್ಲಿ ನೀಡಲಾದ ಪ್ರಮಾಣಪತ್ರವು, ತೆರಿಗೆ ವರ್ಷ 2026–27ಕ್ಕೆ ಸಂಬಂಧಿಸಿದಂತೆ ನಿರೀಕ್ಷಿತವಾಗಿ ಸ್ವೀಕರಿಸಬೇಕಾದ ಮೊತ್ತದ ಮೇಲೆ ಕಡಿಮೆ/ಶೂನ್ಯ ದರದಲ್ಲಿ ತೆರಿಗೆ ಕಡಿತಕ್ಕಾಗಿ ನೀಡಲಾಗಿದ್ದರೆ, 1 ಏಪ್ರಿಲ್, 2026ರಂದು ಅಥವಾ ಅದರ ನಂತರ ಮಾಡಲಾದ ಪಾವತಿಗಳು/ಜಮಾಗಳಿಗೂ ಮಾನ್ಯವಾಗಿರುತ್ತದೆ.
8. ತೆರಿಗೆ ವರ್ಷ 2026–27ಕ್ಕೆ ಹೊಸ ಕಾಯ್ದೆಯ ಅಡಿಯಲ್ಲಿ ಕಡಿಮೆ/ಶೂನ್ಯ ತೆರಿಗೆ ತಡೆಹಿಡಿಯುವಿಕೆ ಪ್ರಮಾಣಪತ್ರವನ್ನು ಪಡೆಯುವ ಪ್ರಕ್ರಿಯೆ ಏನು?
ಪಾವತಿಯನ್ನು ಸ್ವೀಕರಿಸುವವರು (Payee) ಆದಾಯ ತೆರಿಗೆ ನಿಯಮಗಳು, 2026ರಲ್ಲಿ ನಿರ್ದಿಷ್ಟಪಡಿಸಿದ ಫ಼ಾರ್ಮ್ ಸಂಖ್ಯೆ 128ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಮೌಲ್ಯಮಾಪನ ಅಧಿಕಾರಿ, ಪಾವತಿಯನ್ನು ಸ್ವೀಕರಿಸುವವರ ಒಟ್ಟು ಆದಾಯವು ಕಡಿಮೆ ದರ ಅಥವಾ ಶೂನ್ಯ ತೆರಿಗೆ ಕಡಿತವನ್ನು ಸಮರ್ಥಿಸುತ್ತದೆ ಎಂದು ತೃಪ್ತಿಯಾದ ನಂತರ, ದರ ಮತ್ತು ಅದರ ಮಾನ್ಯತಾ ಅವಧಿಯನ್ನು ಸೂಚಿಸುವ ಪ್ರಮಾಣಪತ್ರವನ್ನು ನೀಡುತ್ತಾರೆ. ಅರ್ಜಿ ಪ್ರಕ್ರಿಯೆ TRACES ಪೋರ್ಟಲ್ ಅಥವಾ ಇ-ಸಲ್ಲಿಕೆ ಪೋರ್ಟಲ್ ಮೂಲಕ ಲಭ್ಯವಿರುತ್ತದೆ, ಇದು ಪ್ರಸ್ತುತ ಇರುವ ಪ್ರಕ್ರಿಯೆಯಂತೆಯೇ ಇರುತ್ತದೆ.
9. 1961ರ ಕಾಯ್ದೆಯ ಅಡಿಯಲ್ಲಿ ಫ಼ಾರ್ಮ್ 15G ಮತ್ತು ಫ಼ಾರ್ಮ್ 15H ಅನ್ನು ಸಲ್ಲಿಸುವ ಮೂಲ ಉದ್ದೇಶವೇನು?
1961ರ ಕಾಯ್ದೆಯ ವಿಧಿ ವ್ಯವಸ್ಥೆಯ ಅಡಿಯಲ್ಲಿ, ಫ಼ಾರ್ಮ್ 15G ಮತ್ತು ಫ಼ಾರ್ಮ್ 15H ಅರ್ಹ ತೆರಿಗೆದಾರರು ಪಾವತಿದಾರರಿಗೆ (ಉದಾಹರಣೆಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ) ಸಲ್ಲಿಸುವ ಸ್ವಯಂ-ಘೋಷಣೆಗಳಾಗಿದ್ದು, TDS ಕಡಿತಗೊಳಿಸಬಾರದೆಂದು ವಿನಂತಿಸಲು ಬಳಸಲಾಗುತ್ತದೆ.
10. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಫ಼ಾರ್ಮ್ 15G ಮತ್ತು ಫ಼ಾರ್ಮ್ 15H ಅನ್ನು ಯಾವ ವಿಧಿ ನಿಬಂಧನೆಗಳು ನಿಯಂತ್ರಿಸುತ್ತಿದ್ದವು, ಮತ್ತು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಅದಕ್ಕೆ ಅನುಗುಣವಾದ ನಿಬಂಧನೆ ಯಾವುದು?
ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಫ಼ಾರ್ಮ್ 15G ಮತ್ತು ಫ಼ಾರ್ಮ್ 15H ಅನ್ನು ಸೆಕ್ಷನ್ 197A ನಿಯಂತ್ರಿಸುತ್ತಿತ್ತು. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಇದಕ್ಕೆ ಅನುಗುಣವಾದ ನಿಬಂಧನೆ ಸೆಕ್ಷನ್ 393(6) ಆಗಿದ್ದು, ಅದರ ಪ್ರಕಾರ ಆದಾಯವನ್ನು ಸ್ವೀಕರಿಸುವವರು ತಮ್ಮ ತೆರಿಗೆ ವರ್ಷದ ಅಂದಾಜು ಒಟ್ಟು ಆದಾಯದ ಮೇಲೆ ತೆರಿಗೆ ಶೂನ್ಯವಾಗಿರುತ್ತದೆ ಎಂದು ಲಿಖಿತ ಘೋಷಣೆಯನ್ನು ಸಲ್ಲಿಸಲು ಅನುಮತಿಸುತ್ತದೆ.
11. ತೆರಿಗೆ ವರ್ಷ 2026–27ಕ್ಕೆ ಫ಼ಾರ್ಮ್ 15G/15H ಅನ್ನು ಯಾವ ಸ್ವರೂಪದಲ್ಲಿ ಸಲ್ಲಿಸಬೇಕು?
ತೆರಿಗೆ ವರ್ಷವು 01.04.2026ರಂದು ಅಥವಾ ಅದರ ನಂತರ ಆರಂಭವಾದರೆ, ಅಂತಹ ಘೋಷಣೆಯನ್ನು ಆದಾಯ ತೆರಿಗೆ ನಿಯಮಗಳು, 2026ರಲ್ಲಿ ನಿರ್ದಿಷ್ಟಪಡಿಸಿದ ಫ಼ಾರ್ಮ್ ಸಂಖ್ಯೆ 121ರಲ್ಲಿ ಸಲ್ಲಿಸಬೇಕು.
12. ಹಳೆಯ ವಿಧಿ ಚೌಕಟ್ಟಿನ ಅಡಿಯಲ್ಲಿ ಫ಼ಾರ್ಮ್ 15G ಮತ್ತು ಫ಼ಾರ್ಮ್ 15H ಅನ್ನು ಸಲ್ಲಿಸಲು ಯಾರು ಅರ್ಹರು, ಮತ್ತು 2025ರ ಕಾಯ್ದೆಯ ಅಡಿಯಲ್ಲಿ ಅರ್ಹತಾ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇದೆಯೇ?
ಫ಼ಾರ್ಮ್ 15G ಅನ್ನು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವಾಸಿ ವ್ಯಕ್ತಿ ಅಥವಾ ನಿಗದಿತ ಆದಾಯ ಮಿತಿಗಳಿಗೆ ಒಳಪಡುವ ಇತರ ಅರ್ಹ ವ್ಯಕ್ತಿಗಳು (ಕಂಪನಿಗಳು ಮತ್ತು ವ್ಯವಹಾರಸಂಸ್ಥೆಗಳನ್ನು ಹೊರತುಪಡಿಸಿ) ಸಲ್ಲಿಸಬಹುದು. ಫ಼ಾರ್ಮ್ 15H ಅನ್ನು 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ನಿವಾಸಿ ವ್ಯಕ್ತಿ ಸಲ್ಲಿಸಬಹುದು. 2025ರ ಕಾಯ್ದೆಯ ಸೆಕ್ಷನ್ 393(6)ರ ಅಡಿಯಲ್ಲಿ ಈ ಅರ್ಹತಾ ಮಾನದಂಡಗಳು ಹಿಂದಿನಂತೆಯೇ ಮುಂದುವರಿಯುತ್ತವೆ.
13. ಹಿಂದಿನ ವ್ಯವಸ್ಥೆಯಲ್ಲಿ ಪ್ರತಿ ಫ಼ಾರ್ಮ್ 15G/15Hಗೆ ಪ್ರತ್ಯೇಕ UIN ನೀಡುವಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತಿದ್ದವು, ಮತ್ತು ಪರಿಷ್ಕೃತ ಚೌಕಟ್ಟು ಈ ಸಮಸ್ಯೆಯನ್ನು ಹೇಗೆ ಪರಿಹರಿಸಿದೆ?
ಹಿಂದಿನ ವ್ಯವಸ್ಥೆಯಲ್ಲಿ, ಒಂದೇ PAN ಮತ್ತು ಒಂದೇ ತೆರಿಗೆ ವರ್ಷವಾಗಿದ್ದರೂ, ಪ್ರತಿ ಪಾವತಿದಾರ (payer) ಅಥವಾ ತೆರಿಗೆ ಕಡಿತಗಾರ (deductor) ಸ್ವೀಕರಿಸಿದ ಪ್ರತಿಯೊಂದು ಫ಼ಾರ್ಮ್ 15G/15Hಗಾಗಿ ಪ್ರತ್ಯೇಕ ವಿಶಿಷ್ಟ ಗುರುತು ಸಂಖ್ಯೆ (UIN) ಅನ್ನು ರಚಿಸಬೇಕಾಗುತ್ತಿತ್ತು. ಇದರಿಂದ ಪುನರಾವರ್ತನೆ ಹಾಗೂ ಹೊಂದಾಣಿಕೆ (reconciliation) ಸಂಬಂಧಿತ ಪ್ರಾಯೋಗಿಕ ತೊಂದರೆಗಳು ಉಂಟಾಗುತ್ತಿತ್ತು.
ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ, ಇಲಾಖೆಯು ಪ್ರತಿ PANಗೆ ಒಂದು ತೆರಿಗೆ ವರ್ಷಕ್ಕೆ ಒಂದೇ UIN ಅನ್ನು ನೀಡುತ್ತದೆ. ಅದೇ ತೆರಿಗೆದಾರರು ವಿವಿಧ ಪಾವತಿದಾರರಿಗೆ ಸಲ್ಲಿಸುವ ಎಲ್ಲಾ ಘೋಷಣೆಗಳು ಈ ಒಂದೇ UINಗೆ ಲಿಂಕ್ ಆಗಿರುತ್ತವೆ. ಇದರಿಂದ ಏಕೀಕರಣ, ಸುಗಮ ಜಾಡುಹಿಡಿಯುವಿಕೆ (tracking) ಹಾಗೂ ಪುನರಾವರ್ತನೆಯ ನಿವಾರಣೆ ಸಾಧ್ಯವಾಗುತ್ತದೆ. ಪಾವತಿದಾರರು ಇಲಾಖೆಯ ಪೋರ್ಟಲ್ನಿಂದ ಸಂಬಂಧಿತ UIN ಅನ್ನು ಪಡೆಯಲು ಸೌಲಭ್ಯವನ್ನು ಒದಗಿಸಲಾಗುತ್ತದೆ.
14. ಹಿಂದಿನ ಚೌಕಟ್ಟಿನಲ್ಲಿ, ತೆರಿಗೆದಾರರು ಫ಼ಾರ್ಮ್ 15G ಅಥವಾ ಫ಼ಾರ್ಮ್ 15H ಅನ್ನು ಸಲ್ಲಿಸಬೇಕೆಂಬುದನ್ನು ನಿರ್ಧರಿಸುವಲ್ಲಿ ಆಗಾಗ ಗೊಂದಲವನ್ನು ಎದುರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಈ ಸಮಸ್ಯೆಯನ್ನು ಹೇಗೆ ಪರಿಹರಿಸಲಾಗಿದೆ?
ಹಿಂದಿನ ವ್ಯವಸ್ಥೆಯಲ್ಲಿ, ತೆರಿಗೆದಾರರು ತಮ್ಮ ಅರ್ಹತೆಯನ್ನು ನಿರ್ಧರಿಸಿ ಫ಼ಾರ್ಮ್ 15G ಅಥವಾ ಫ಼ಾರ್ಮ್ 15H ಅನ್ನು ಸಲ್ಲಿಸಬೇಕಾಗುತ್ತಿತ್ತು, ಇದರಿಂದ ಕೆಲವೊಮ್ಮೆ ಗೊಂದಲ ಉಂಟಾಗುತ್ತಿತ್ತು. ಪರಿಷ್ಕೃತ ಚೌಕಟ್ಟಿನಲ್ಲಿ ಈ ಎರಡೂ ಫ಼ಾರ್ಮ್ಸ್ ಅನ್ನು ಒಂದೇ ಏಕೀಕೃತ ಫ಼ಾರ್ಮ್ 121ರಲ್ಲಿ ವಿಲೀನಗೊಳಿಸಲಾಗಿದೆ. ಇದರಿಂದ ಗೊಂದಲ ನಿವಾರಣೆಯಾಗಿದ್ದು, ತೆರಿಗೆದಾರರು ಹಾಗೂ ಪಾವತಿದಾರರಿಗೆ ಅನುಸರಣೆ ಪ್ರಕ್ರಿಯೆ ಸರಳವಾಗಿದೆ.
15. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ, ವೇತನವನ್ನು ಬಾಕಿ (arrears) ಅಥವಾ ಮುಂಗಡ (advance)ವಾಗಿ ಸ್ವೀಕರಿಸುವುದರಿಂದ ಉಂಟಾಗುವ ಹೆಚ್ಚಿದ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುವ ಸಲುವಾಗಿ ಪರಿಹಾರವನ್ನು ಪಡೆಯಲು ಯಾವ ಫ಼ಾರ್ಮ್ ಅನ್ನು ಸಲ್ಲಿಸಬೇಕು?
ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 157ವು, ವೇತನವನ್ನು ಮುಂಗಡವಾಗಿ ಅಥವಾ ಬಾಕಿಯಾಗಿ ಸ್ವೀಕರಿಸುವ ಸಂದರ್ಭಗಳಲ್ಲಿ, ಅಥವಾ ಗ್ರ್ಯಾಚ್ಯುಟಿ, ಉದ್ಯೋಗದಿಂದ ಹೊರಗುಳಿಯುವ ಪರಿಹಾರ (retrenchment compensation) ಅಥವಾ ಪಿಂಚಣಿ ರೂಪಾಂತರ (commutation of pension) ಸ್ವೀಕರಿಸುವ ಸಂದರ್ಭಗಳಲ್ಲಿ ತೆರಿಗೆದಾರರಿಗೆ ಪರಿಹಾರವನ್ನು ಒದಗಿಸುತ್ತದೆ. ಇದರ ಉದ್ದೇಶವು ಒಂದು ವರ್ಷದಲ್ಲಿ ಆದಾಯ ಗುಚ್ಛವಾಗುವ ಕಾರಣದಿಂದ ಉಂಟಾಗುವ ಹೆಚ್ಚಿನ ತೆರಿಗೆ ಭಾರವನ್ನು ಸಮತೋಲನಗೊಳಿಸುವುದಾಗಿದೆ. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಇಂತಹ ಪರಿಹಾರವನ್ನು ಪಡೆಯಲು ತೆರಿಗೆದಾರರು ಫ಼ಾರ್ಮ್ 10E ಅನ್ನು ಸಲ್ಲಿಸಬೇಕಾಗಿತ್ತು. ಆದರೆ ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ, ಈ ಪರಿಹಾರವನ್ನು ಪಡೆಯಲು ತೆರಿಗೆದಾರರು ಕಾಯ್ದೆಯ ಸೆಕ್ಷನ್ 263(1)(c)ರಲ್ಲಿ ನಿರ್ದಿಷ್ಟಪಡಿಸಿದ ಕೊನೆಯ ದಿನಾಂಕದೊಳಗೆ ಫ಼ಾರ್ಮ್ ಸಂಖ್ಯೆ 39 ಅನ್ನು ಸಲ್ಲಿಸಬೇಕು.
16. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಸಲ್ಲಿಸಬೇಕಾದ ಫ಼ಾರ್ಮ್ 39ರ ರಚನೆ ಏನು?
ಫ಼ಾರ್ಮ್ 39 ಎರಡು ಭಾಗಗಳನ್ನು ಹೊಂದಿದೆ:
(i) ಭಾಗ A — ತೆರಿಗೆದಾರರ ಮೂಲ ವಿವರಗಳು ಹಾಗೂ ಪರಿಹಾರವನ್ನು ಕೇಳಲಾಗುತ್ತಿರುವ ತೆರಿಗೆ ವರ್ಷದ ವಿವರಗಳು;
(ii) ಭಾಗ B — ಸ್ವೀಕೃತಿಗಳ ವಿವರಗಳು (ಹೆಚ್ಚುವರಿ ವೇತನ, ಗ್ರ್ಯಾಚ್ಯುಟಿ, ಉದ್ಯೋಗದಿಂದ ಹೊರಗುಳಿಯುವ ಪರಿಹಾರ, ಪಿಂಚಣಿ ರೂಪಾಂತರ) ಹಾಗೂ ಏಕೀಕೃತ ಲೆಕ್ಕಾಚಾರ ಪಟ್ಟಿಗಳು ಮತ್ತು ಸ್ವಯಂ-ಪೂರ್ತಿಗೊಳ್ಳುವ (auto-populated) ಪರಿಹಾರ ವಿವರಗಳು.
17. ಹಿಂದಿನ ಫ಼ಾರ್ಮ್ ಸಂಖ್ಯೆ 10Eಗೆ ಹೋಲಿಸಿದರೆ ಫ಼ಾರ್ಮ್ ಸಂಖ್ಯೆ 39 ಅನ್ನು ಹೇಗೆ ಸುಧಾರಿಸಲಾಗಿದೆ?
ಹಿಂದಿನ ವ್ಯವಸ್ಥೆಯಲ್ಲಿ, ಫ಼ಾರ್ಮ್ ಸಂಖ್ಯೆ 10Eಯಲ್ಲಿ ತೆರಿಗೆದಾರರು ಅದೇ ವೈಯಕ್ತಿಕ ಹಾಗೂ ಹಣಕಾಸು ವಿವರಗಳನ್ನು ಪುನಃ ಪುನಃ ನಮೂದಿಸಬೇಕಾಗುತ್ತಿತ್ತು. ಇದರಿಂದ ಅನುಸರಣೆ (compliance) ಭಾರ ಹೆಚ್ಚಾಗಿ, ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ತಪ್ಪುಗಳ ಸಂಭವವೂ ಹೆಚ್ಚಾಗುತ್ತಿತ್ತು. ಫ಼ಾರ್ಮ್ 39 ಈ ಸಮಸ್ಯೆಗಳನ್ನು ಪರಿಹರಿಸಲು ಸ್ಮಾರ್ಟ್ ಹಾಗೂ ತಂತ್ರಜ್ಞಾನ ಆಧಾರಿತ ಇಂಟರ್ಫೇಸ್ ಅನ್ನು ಹೊಂದಿದೆ. ಇದರಲ್ಲಿ ಡೇಟಾ ಸ್ವಯಂ-ಪೂರ್ತಿ (auto-population), ತಕ್ಷಣದ ಪರಿಶೀಲನೆಗಳು (real-time validations), ಪ್ರಮಾಣಿತ ಇನ್ಪುಟ್ ಉಪಕರಣಗಳು (ಡ್ರಾಪ್ಡೌನ್ಗಳು ಮತ್ತು ದಿನಾಂಕ ಆಯ್ಕೆ ಸಾಧನಗಳು), ಡೇಟಾಬೇಸ್ ಏಕೀಕರಣ, ಚೆಕ್ಬಾಕ್ಸ್ ಆಧಾರಿತ ದೃಢೀಕರಣ ಇತ್ಯಾದಿ ಸೌಲಭ್ಯಗಳಿವೆ. ಈ ಸುಧಾರಣೆಗಳು ಪುನರಾವರ್ತನೆಯನ್ನು ಕಡಿಮೆ ಮಾಡಿ, ನಿಖರತೆಯನ್ನು ಹೆಚ್ಚಿಸಿ, ಹಾಗೂ ಅನುಸರಣೆಯನ್ನು ಸರಳಗೊಳಿಸುತ್ತವೆ.
18. ಹಿಂದಿನ ಫ಼ಾರ್ಮ್ ಸಂಖ್ಯೆ 10Eಗೆ ಹೋಲಿಸಿದರೆ ಫ಼ಾರ್ಮ್ ಸಂಖ್ಯೆ 39ರಲ್ಲಿ ಮಾಡಲಾದ ಇತರ ಸುಧಾರಣೆಗಳು ಯಾವುವು?
ಹಿಂದಿನ ಫ಼ಾರ್ಮ್ನಲ್ಲಿ, 1961ರ ಕಾಯ್ದೆಯ ಸೆಕ್ಷನ್ 89(1) ಅಡಿಯಲ್ಲಿ ಒಟ್ಟು ಆದಾಯ ಮತ್ತು ತೆರಿಗೆ ಪರಿಹಾರವನ್ನು ಲೆಕ್ಕ ಹಾಕಲು
ರಚನಾತ್ಮಕ ಲೆಕ್ಕಾಚಾರ ಪಟ್ಟಿಗಳು (structured computation tables) ಇರಲಿಲ್ಲ.
ಈ ಸ್ಪಷ್ಟತೆಯ ಕೊರತೆಯಿಂದ ತೆರಿಗೆದಾರರು ಅರ್ಹ ಪರಿಹಾರ ಮೊತ್ತವನ್ನು ನಿರ್ಧರಿಸುವಲ್ಲಿ ಆಗಾಗ ಗೊಂದಲವನ್ನು ಎದುರಿಸುತ್ತಿದ್ದರು.
ಆದಾಗ್ಯೂ, ಫ಼ಾರ್ಮ್ ಸಂಖ್ಯೆ 39 ಈಗ
ಹೆಚ್ಚುವರಿ ವೇತನ, ಗ್ರ್ಯಾಚ್ಯುಟಿ, ಪಿಂಚಣಿ ಹಾಗೂ ಇತರ ಅರ್ಹ ಬಾಕಿ/ಸ್ವೀಕೃತಿಗಳಂತಹ ಪ್ರತಿಯೊಂದು ವರ್ಗಕ್ಕೂ ಏಕೀಕೃತ ಕೋಷ್ಟಕಗಳನ್ನು ಒಳಗೊಂಡಿದೆ. ಈ ಪಟ್ಟಿಗಳು ಸೂತ್ರಗಳು ಮತ್ತು ರಚನಾತ್ಮಕ ಲೆಕ್ಕಾಚಾರಗಳನ್ನು ಸ್ಪಷ್ಟವಾಗಿ ತೋರಿಸುತ್ತವೆ. ಇದರಿಂದ ತೆರಿಗೆದಾರರ ಇನ್ಪುಟ್ ಸರಳವಾಗಿದ್ದು, ವ್ಯವಸ್ಥೆ ಆಧಾರಿತ ಮಾನ್ಯತೆ (system-based validation) ಸಾಧ್ಯವಾಗುತ್ತದೆ. ಇದರಿಂದ ಸಲ್ಲಿಕೆಗೆ ಹೆಚ್ಚಿನ ಸ್ಪಷ್ಟತೆ, ಪಾರದರ್ಶಕತೆ ಮತ್ತು ಸರಳತೆ ಲಭಿಸುತ್ತದೆ.
19. 31 ಜುಲೈ 2026ರೊಳಗೆ ಸಲ್ಲಿಸಬೇಕಾದ ರಿಟರ್ನ್ಗೆ ಸಂಬಂಧಿಸಿದಂತೆ, AY 2026–27ರಲ್ಲಿ ಪರಿಹಾರವನ್ನು ಪಡೆಯಲು ನಾನು ಯಾವ ಫ಼ಾರ್ಮ್ ಅನ್ನು ಬಳಸಬೇಕು?
ಮೌಲ್ಯಮಾಪನ ವರ್ಷ 2026–27ರ ಆದಾಯದ ತೆರಿಗೆಯೋಗ್ಯತೆಯು ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ, ಹಳೆಯ ಕಾಯ್ದೆಯ ಸೆಕ್ಷನ್ 89 ಅಡಿಯಲ್ಲಿ ಯಾವುದೇ ಪರಿಹಾರವನ್ನು ಪಡೆಯಲು, ತೆರಿಗೆದಾರರು ಫ಼ಾರ್ಮ್ 10E ಅನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. ಹೊಸ ಫ಼ಾರ್ಮ್ ಸಂಖ್ಯೆ 39 ಅನ್ನು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಪಡೆಯುವ ಪರಿಹಾರಗಳಿಗೆ ಮಾತ್ರ ಅನ್ವಯಿಸಲಾಗುತ್ತದೆ ಮತ್ತು ಇದು ತೆರಿಗೆ ವರ್ಷ 2026–27ರಿಂದ ಜಾರಿಗೆ ಬರುತ್ತದೆ.
20. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಫ಼ಾರ್ಮ್ 15CA ಮತ್ತು ಫ಼ಾರ್ಮ್ 15CB ಯ ಉದ್ದೇಶ ಏನು ಮತ್ತು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಅದಕ್ಕೆ ಅನುಗುಣವಾದ ನಿಬಂಧನೆಗಳು ಯಾವುವು?
ಫ಼ಾರ್ಮ್ 15CA ಎಂಬುದು ರೆಮಿಟ್ಟರ್ (ವಿದೇಶಿ ನಿವಾಸಿಗೆ ಪಾವತಿ ಮಾಡುವ ವ್ಯಕ್ತಿ) ನೀಡುವ ಘೋಷಣೆಯಾಗಿದ್ದು, ರೆಮಿಟೆನ್ಸ್ನ ಸ್ವರೂಪ ಮತ್ತು ಅನ್ವಯವಾಗುವ TDS ಕುರಿತು ಮಾಹಿತಿಯನ್ನು ಸಲ್ಲಿಸಲು ಬಳಸಲಾಗುತ್ತದೆ. ಫ಼ಾರ್ಮ್ 15CB ಎಂಬುದು ಚಾರ್ಟರ್ಡ್ ಅಕೌಂಟೆಂಟ್ ನೀಡುವ ಪ್ರಮಾಣಪತ್ರವಾಗಿದ್ದು, ರೆಮಿಟೆನ್ಸ್ನ ಸ್ವರೂಪ, ಅನ್ವಯವಾಗುವ DTAA ನಿಬಂಧನೆಗಳು ಮತ್ತು TDS ದರವನ್ನು ದೃಢೀಕರಿಸುತ್ತದೆ. ಹಳೆಯ ಕಾಯ್ದೆಯ ಅಡಿಯಲ್ಲಿ ಇವು ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 195(6)ರಿಂದ ನಿಯಂತ್ರಿಸಲ್ಪಟ್ಟಿದ್ದವು.
ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಇದಕ್ಕೆ ಅನುಗುಣವಾದ ನಿಬಂಧನೆಗಳು ಸೆಕ್ಷನ್ 397(3)(d)ರಲ್ಲಿ ಒಳಗೊಂಡಿವೆ. ಹೊಸ ಕಾಯ್ದೆಯ ಅಡಿಯಲ್ಲಿ ಸಂಬಂಧಿತ ಫ಼ಾರ್ಮ್ಸ್ ಫ಼ಾರ್ಮ್ ಸಂಖ್ಯೆ 145 (ಹಳೆಯ ಫ಼ಾರ್ಮ್ 15CAಗೆ ಸಮಾನ) ಮತ್ತು ಫ಼ಾರ್ಮ್ ಸಂಖ್ಯೆ 146 (ಹಳೆಯ ಫ಼ಾರ್ಮ್ 15CBಗೆ ಸಮಾನ) ಆಗಿವೆ.
21. 31 ಮಾರ್ಚ್ 2026ಕ್ಕೂ ಮುನ್ನ ಮಾಡಿದ ರೆಮಿಟೆನ್ಸ್ಗಳಿಗೆ ಸಲ್ಲಿಸಲಾದ ಫ಼ಾರ್ಮ್ 15CA/15CBಗಳು ಹೊಸ ಕಾಯ್ದೆ ಜಾರಿಗೆ ಬಂದ ನಂತರವೂ ಮಾನ್ಯವಾಗಿರುತ್ತವೆಯೇ?
ಹೌದು — ರೆಮಿಟೆನ್ಸ್ ಫ಼ಾರ್ಮ್ನಲ್ಲಿ ಉಲ್ಲೇಖಿಸಿದ ದಿನಾಂಕದೊಳಗೆ ನಿಜವಾಗಿ ನಡೆದಿದ್ದರೆ, 31 ಮಾರ್ಚ್ 2026ರ ಮೊದಲು ಮಾಡಿದ ರೆಮಿಟೆನ್ಸ್ಗಳಿಗೆ ಈಗಾಗಲೇ ಸಲ್ಲಿಸಲಾದ ಫ಼ಾರ್ಮ್ 15CA/15CBಗಳು, ಹೊಸ ಆದಾಯ ತೆರಿಗೆ ಕಾಯ್ದೆ 1 ಏಪ್ರಿಲ್ 2026ರಿಂದ ಜಾರಿಗೆ ಬಂದ ನಂತರವೂ ಮಾನ್ಯವಾಗಿರುತ್ತವೆ. ಪ್ರಸ್ತುತ ಪ್ರಕ್ರಿಯೆಯ ಪ್ರಕಾರ, ಈ ಫ಼ಾರ್ಮ್ಸ್ ಸಲ್ಲಿಸಿದ ಫ಼ಾರ್ಮ್ 15CA/15CBಯಲ್ಲಿ ಸೂಚಿಸಲಾದ ನಿರ್ದಿಷ್ಟ ರೆಮಿಟೆನ್ಸ್ ದಿನಾಂಕದವರೆಗೆ ಮಾನ್ಯವಾಗಿರುತ್ತವೆ. ಯಾವುದೇ ಕಾರಣದಿಂದ ಆ ಅವಧಿಯೊಳಗೆ ರೆಮಿಟೆನ್ಸ್ ಪೂರ್ಣಗೊಳ್ಳದಿದ್ದರೆ, ಪಾವತಿಯನ್ನು ಪ್ರಕ್ರಿಯೆಗೊಳಿಸುವ ಮೊದಲು ತೆರಿಗೆದಾರರು ಪುನಃ ಹೊಸ ಫ಼ಾರ್ಮ್ಸ್ ಸಲ್ಲಿಸಬೇಕಾಗುತ್ತದೆ.
22. 1 ಏಪ್ರಿಲ್ 2026ರಂದು ಅಥವಾ ಅದರ ನಂತರ ಮಾಡಿದ ರೆಮಿಟೆನ್ಸ್ಗಳಿಗೆ ಯಾವ ಫ಼ಾರ್ಮ್ಸ್ ಮತ್ತು ನಿಬಂಧನೆಗಳು ಅನ್ವಯವಾಗುತ್ತವೆ
1 ಏಪ್ರಿಲ್ 2026ರಂದು ಅಥವಾ ಅದರ ನಂತರ ಮಾಡಿದ ರೆಮಿಟೆನ್ಸ್ಗಳಿಗೆ ಆದಾಯ ತೆರಿಗೆ ಕಾಯ್ದೆ, 2025ರ ನಿಬಂಧನೆಗಳು ಅನ್ವಯವಾಗುತ್ತವೆ. ಆದಾಯ ತೆರಿಗೆ ನಿಯಮಗಳು, 2026ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಫ಼ಾರ್ಮ್ಸ್ (ಫ಼ಾರ್ಮ್ ಸಂಖ್ಯೆ 145 ಮತ್ತು 146) ಅನ್ನು ಬಳಸಬೇಕಾಗುತ್ತದೆ. ರೆಮಿಟೆನ್ಸ್ ಕುರಿತು ಮಾಹಿತಿ ಸಲ್ಲಿಸುವುದು, ನಿಗದಿತ ಮಿತಿಯನ್ನು ಮೀರಿದ ಮೊತ್ತಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರ ಪಡೆಯುವುದು, TDS ಅನುಸರಣೆ ಖಚಿತಪಡಿಸುವುದು ಮುಂತಾದ ಮೂಲಭೂತ ಅವಶ್ಯಕತೆಗಳು ಹಾಗೆಯೇ ಮುಂದುವರಿಯುತ್ತವೆ.
23. ಹೊಸ ಕಾಯ್ದೆಯ ಅಡಿಯಲ್ಲಿ ಫ಼ಾರ್ಮ್ 15CA/15CB ಸಲ್ಲಿಸುವ ಮಿತಿಯಲ್ಲಿ (threshold) ಯಾವುದೇ ಬದಲಾವಣೆಗಳಿವೆಯೇ?
ಫ಼ಾರ್ಮ್ ಸಂಖ್ಯೆ 145 (ಫ಼ಾರ್ಮ್ 15CAಗೆ ಸಮಾನ) ಮತ್ತು ಫ಼ಾರ್ಮ್ ಸಂಖ್ಯೆ 146 (ಫ಼ಾರ್ಮ್ 15CBಗೆ ಸಮಾನ) ಸಲ್ಲಿಸುವ ಮಿತಿಗಳು ಆದಾಯ ತೆರಿಗೆ ನಿಯಮಗಳು, 2026ರ ನಿಯಮ 220ರಲ್ಲಿ ನಿರ್ದಿಷ್ಟಪಡಿಸಲಾಗಿದೆ. ಆದಾಯ ತೆರಿಗೆ ನಿಯಮಗಳು, 2026ರಲ್ಲಿ ಹಳೆಯ ನಿಯಮಗಳಲ್ಲಿದ್ದಂತೆಯೇ ಸಮಾನ ಮಿತಿಗಳನ್ನು ಉಳಿಸಿಕೊಂಡಿವೆ.
24. ಫೆಬ್ರವರಿ 2026ರಲ್ಲಿ ಉಂಟಾದ ಬಾಧ್ಯತೆಗೆ ಸಂಬಂಧಿಸಿ ಏಪ್ರಿಲ್ 2026ರಲ್ಲಿ ರೆಮಿಟೆನ್ಸ್ ಮಾಡಿದರೆ, TDS ದರಗಳು ಮತ್ತು ವರದಿ ಸ್ವರೂಪಗಳು ಯಾವ ಕಾಯ್ದೆಯ (ಆದಾಯ ತೆರಿಗೆ ಕಾಯ್ದೆ, 1961 ಅಥವಾ 2025) ಅಡಿಯಲ್ಲಿ ನಿಯಂತ್ರಿಸಲ್ಪಡುತ್ತವೆ?
ಪ್ರಕ್ರಿಯಾತ್ಮಕ ಅವಶ್ಯಕತೆಗಳು (ಫ಼ಾರ್ಮ್ 15CA/CB) ರೆಮಿಟೆನ್ಸ್ ಮಾಡುವ ದಿನಾಂಕದಲ್ಲಿ ಜಾರಿಗೆ ಇರುವ ಕಾನೂನಿನ ಪ್ರಕಾರ (2025ರ ಕಾಯ್ದೆ) ಅನ್ವಯವಾಗುತ್ತವೆ. ಆದರೆ, ಮೂಲ ಆದಾಯದ ತೆರಿಗೆಯೋಗ್ಯತೆ (taxability) ಅದು ಉಂಟಾದ ವರ್ಷಕ್ಕೆ ಅನ್ವಯವಾಗುವ ಕಾಯ್ದೆಯ ಪ್ರಕಾರ (1961ರ ಕಾಯ್ದೆ) ನಿಯಂತ್ರಿಸಲ್ಪಡುತ್ತದೆ.
25. ಆದಾಯ ತೆರಿಗೆ ನಿಯಮಗಳು, 2026ರ ಅಡಿಯಲ್ಲಿ ಫ಼ಾರ್ಮ್ 145ರ ರಚನೆ ಏನು ಮತ್ತು ಅದು ರೆಮಿಟರ್ಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ?
ಫ಼ಾರ್ಮ್ ಸಂಖ್ಯೆ 145 ನಾಲ್ಕು ಭಾಗಗಳನ್ನು ಹೊಂದಿದೆ:
(i) ಭಾಗ A — ರೆಮಿಟೆನ್ಸ್ ಕಾಯ್ದೆಯ ಅಡಿಯಲ್ಲಿ ತೆರಿಗೆಯೋಗ್ಯವಾಗಿದ್ದರೆ ಅಥವಾ ವರ್ಷದಲ್ಲಿ ಒಟ್ಟು ಮೊತ್ತವು ರೂ. 5 ಲಕ್ಷವನ್ನು ಮೀರದಿದ್ದರೆ ಸಲ್ಲಿಸಬೇಕು;
(ii) ಭಾಗ B — ರೆಮಿಟೆನ್ಸ್ ತೆರಿಗೆಯೋಗ್ಯವಾಗಿದ್ದು, ರೂ. 5 ಲಕ್ಷವನ್ನು ಮೀರಿದರೆ ಮತ್ತು ಸೆಕ್ಷನ್ 395(1)/395(2) ಅಡಿಯಲ್ಲಿ ಮೌಲ್ಯಮಾಪನ ಅಧಿಕಾರಿಯಿಂದ ಪ್ರಮಾಣಪತ್ರ ಪಡೆದಿದ್ದರೆ ಸಲ್ಲಿಸಬೇಕು;
(iii) ಭಾಗ C — ರೆಮಿಟೆನ್ಸ್ ತೆರಿಗೆಯೋಗ್ಯವಾಗಿದ್ದು, ರೂ. 5 ಲಕ್ಷವನ್ನು ಮೀರಿದರೆ ಮತ್ತು (ಫ಼ಾರ್ಮ್ ಸಂಖ್ಯೆ 146) CA ಪ್ರಮಾಣಪತ್ರ ಪಡೆದಿದ್ದರೆ ಸಲ್ಲಿಸಬೇಕು;
(iv) ಭಾಗ D — ರೆಮಿಟೆನ್ಸ್ ತೆರಿಗೆಯೋಗ್ಯವಲ್ಲದಿದ್ದರೆ (ನಿಯಮ 220(3)ರಲ್ಲಿ ಉಲ್ಲೇಖಿಸಲಾದ ಪಾವತಿಗಳನ್ನು ಹೊರತುಪಡಿಸಿ) ಸಲ್ಲಿಸಬೇಕು.
ಮುಖ್ಯ ಪ್ರಯೋಜನ: ಹೊಸ ಚೌಕಟ್ಟಿನ ಅಡಿಯಲ್ಲಿ, ಫ಼ಾರ್ಮ್ 145ರಲ್ಲಿ ಭಾಗ B ಸಲ್ಲಿಸಲಾಗಿದ್ದರೆ (ಮೌಲ್ಯಮಾಪನ ಅಧಿಕಾರಿ ಪ್ರಮಾಣಪತ್ರ ಪಡೆದಿದ್ದರೆ),
ಭಾಗ C ಅನ್ನು ಸಲ್ಲಿಸುವ ಅಗತ್ಯವಿಲ್ಲ.
ಇದರಿಂದ ಹಳೆಯ ವ್ಯವಸ್ಥೆಯಲ್ಲಿ ಇದ್ದ ಪುನರಾವರ್ತನೆ (duplication) ನಿವಾರಣೆಯಾಗುತ್ತದೆ.
26. ಫ಼ಾರ್ಮ್ 146ರಲ್ಲಿ ಪರಿಚಯಿಸಲಾದ UDIN ವೈಶಿಷ್ಟ್ಯವೇನು?
UDIN (Unique Document Identification Number) ಅನ್ನು ICAI API ಮೂಲಕ ತಕ್ಷಣದ ಪರಿಶೀಲನೆ (real-time verification)ಗಾಗಿ ಪರಿಚಯಿಸಲಾಗಿದೆ. ಇದರಿಂದ ಚಾರ್ಟರ್ಡ್ ಅಕೌಂಟೆಂಟ್ ನೀಡುವ ಪ್ರಮಾಣಪತ್ರದ ಪ್ರಾಮಾಣಿಕತೆ ಖಚಿತವಾಗುತ್ತದೆ ಮತ್ತು ಮೋಸವನ್ನು ತಡೆಯಲಾಗುತ್ತದೆ. ಕೇವಲ ನಿಜವಾದ ಫ಼ಾರ್ಮ್ 146 ಸಲ್ಲಿಕೆಗಳನ್ನೇ ಸ್ವೀಕರಿಸಲಾಗುತ್ತದೆ, ಇದರಿಂದ ತೆರಿಗೆದಾರರು ಮತ್ತು ಇಲಾಖೆಗೆ ಎರಡಕ್ಕೂ ಪ್ರಯೋಜನವಾಗುತ್ತದೆ.
27. ರೆಮಿಟ್ಟರ್ಗೆ ಮೌಲ್ಯಮಾಪನ ಅಧಿಕಾರಿಯಿಂದ (AO) ಪ್ರಮಾಣಪತ್ರ ಇದ್ದರೆ, ಚಾರ್ಟರ್ಡ್ ಅಕೌಂಟೆಂಟ್ನ ಫ಼ಾರ್ಮ್ 146 ಪ್ರಮಾಣಪತ್ರ ಇನ್ನೂ ಅಗತ್ಯವಿದೆಯೇ?
ಇಲ್ಲ. ಫ಼ಾರ್ಮ್ 145ರ ಭಾಗ B ಅನ್ನು (ಮೌಲ್ಯಮಾಪನ ಅಧಿಕಾರಿಯ ಪ್ರಮಾಣಪತ್ರದೊಂದಿಗೆ) ಸಲ್ಲಿಸುವ ತೆರಿಗೆದಾರರು ಚಾರ್ಟರ್ಡ್ ಅಕೌಂಟೆಂಟ್ನ ಫ಼ಾರ್ಮ್ 146 ಅನ್ನು ಪಡೆಯಬೇಕಾಗಿಲ್ಲ. ಇದರಿಂದ ರೆಮಿಟ್ಟರ್ಗಳ ಅನುಸರಣೆ ಭಾರ ಮತ್ತು ವೆಚ್ಚದಲ್ಲಿ ಗಮನಾರ್ಹ ಕಡಿತವಾಗುತ್ತದೆ.
28. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ತೆರಿಗೆ ಪರಿಶೋಧನೆ (Tax Audit) ಸಂಬಂಧಿಸಿದ ಅವಶ್ಯಕತೆ ಏನು, ಮತ್ತು ಮಿತಿಯಲ್ಲಿ (threshold) ಯಾವುದೇ ಬದಲಾವಣೆ ಆಗಿದೆಯೇ?
ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 63 (ಹಳೆಯ ಕಾಯ್ದೆಯ ಸೆಕ್ಷನ್ 44ABಗೆ ಸಮಾನ) ಖಾತೆಗಳ ಪರಿಶೋಧನೆ (audit) ಅವಶ್ಯಕತೆಯನ್ನು ನಿರ್ದಿಷ್ಟಪಡಿಸುತ್ತದೆ. ತೆರಿಗೆ ಪರಿಶೋಧನೆಗೆ ಸಂಬಂಧಿಸಿದ ಮಿತಿಗಳು ಹಿಂದಿನ ಕಾಯ್ದೆಯಲ್ಲಿದ್ದಂತೆಯೇ ಮುಂದುವರಿಯುತ್ತವೆ:
(i) ವ್ಯವಹಾರ: ಒಟ್ಟು ಮಾರಾಟ, ಟರ್ನೋವರ್ ಅಥವಾ ಒಟ್ಟು ಸ್ವೀಕೃತಿಗಳು ರೂ. 1 ಕೋಟಿ ಮೀರಿದರೆ (ನಗದು ವ್ಯವಹಾರಗಳು ಒಟ್ಟು ಸ್ವೀಕೃತಿಗಳ 5% ಮತ್ತು ಒಟ್ಟು ಪಾವತಿಗಳ 5% ಮೀರದಿದ್ದರೆ ರೂ. 10 ಕೋಟಿ ಮಿತಿ ಅನ್ವಯವಾಗುತ್ತದೆ);
(ii) ವೃತ್ತಿ: ಒಟ್ಟು ಸ್ವೀಕೃತಿಗಳು ರೂ. 50 ಲಕ್ಷ ಮೀರಿದರೆ;
(iii) ನಿಗದಿತ (presumptive) ತೆರಿಗೆ ಯೋಜನೆಯನ್ನು ಆಯ್ಕೆ ಮಾಡದೇ, ನಿರ್ದಿಷ್ಟ ಮಿತಿಗಿಂತ ಕಡಿಮೆ ಆದಾಯವನ್ನು ಘೋಷಿಸುವ ವ್ಯಕ್ತಿಗಳು.
29. ಹಣಕಾಸು ವರ್ಷ 2025–26 (ಮೌಲ್ಯಮಾಪನ ವರ್ಷ 2026–27)ಕ್ಕೆ ತೆರಿಗೆ ಪರಿಶೋಧನೆಗಾಗಿ ಯಾವ ಫ಼ಾರ್ಮ್ ಅನ್ನು ಬಳಸಬೇಕು?
ಹಣಕಾಸು ವರ್ಷ 2025–26 (ಮೌಲ್ಯಮಾಪನ ವರ್ಷ 2026–27)ಗಾಗಿ, ತೆರಿಗೆ ಪರಿಶೋಧನಾ ವರದಿಯನ್ನು ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಈಗಿರುವ ಫ಼ಾರ್ಮ್ಸ್ ಬಳಸಿಕೊಂಡೇ ಸಲ್ಲಿಸಬೇಕು — ಫ಼ಾರ್ಮ್ 3CA (ಇತರ ಕಾನೂನಿನ ಅಡಿಯಲ್ಲಿ ಈಗಾಗಲೇ ಪರಿಶೋಧನೆಗೊಂಡವರಿಗೆ), ಫ಼ಾರ್ಮ್ 3CB (ಇತರ ಎಲ್ಲರಿಗೆ), ಮತ್ತು ಫ಼ಾರ್ಮ್ 3CD (1961ರ ಕಾಯ್ದೆಯ ಸೆಕ್ಷನ್ 44AB ಅಡಿಯಲ್ಲಿ ವಿವರಗಳ ಪ್ರಕಟಣೆ). ಮೌಲ್ಯಮಾಪನ ವರ್ಷ 2026–27ಕ್ಕೆ ತೆರಿಗೆ ಪರಿಶೋಧನಾ ವರದಿ ಸಲ್ಲಿಸುವ ಕೊನೆಯ ದಿನಾಂಕ 30 ಸೆಪ್ಟೆಂಬರ್ 2026 ಆಗಿದೆ.
30. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ತೆರಿಗೆ ವರ್ಷ 2026–27ಕ್ಕೆ ತೆರಿಗೆ ಪರಿಶೋಧನೆಗಾಗಿ ಯಾವ ಫ಼ಾರ್ಮ್ ಅನ್ನು ಬಳಸಲಾಗುತ್ತದೆ?
ತೆರಿಗೆ ವರ್ಷ 2026–27ಕ್ಕೆ, ಆದಾಯ ತೆರಿಗೆ ನಿಯಮಗಳು, 2026ರಲ್ಲಿ ನಿರ್ದಿಷ್ಟಪಡಿಸಿದ ಫ಼ಾರ್ಮ್ ಸಂಖ್ಯೆ 26ರಲ್ಲಿ ತೆರಿಗೆ ಪರಿಶೋಧನಾ ವರದಿಯನ್ನು ಸಲ್ಲಿಸಬೇಕು. ಫ಼ಾರ್ಮ್ ಸಂಖ್ಯೆ 26 ಹಿಂದಿನ ಫ಼ಾರ್ಮ್ 3CA, ಫ಼ಾರ್ಮ್ 3CB ಮತ್ತು ಫ಼ಾರ್ಮ್ 3CD ಅನ್ನು ಏಕೀಕರಿಸಿದೆ. ತೆರಿಗೆ ವರ್ಷ 2026–27ಕ್ಕೆ ತೆರಿಗೆ ಪರಿಶೋಧನಾ ವರದಿ ಸಲ್ಲಿಸುವ ಕೊನೆಯ ದಿನಾಂಕ 30 ಸೆಪ್ಟೆಂಬರ್ 2027 ಆಗಿದೆ.
31. ಆದಾಯ ತೆರಿಗೆ ನಿಯಮಗಳು, 2026ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಹೊಸ ಫ಼ಾರ್ಮ್ ಸಂಖ್ಯೆ 26 (ತೆರಿಗೆ ಪರಿಶೋಧನಾ ವರದಿ)ಯ ಪ್ರಮುಖ ವೈಶಿಷ್ಟ್ಯಗಳು ಯಾವುವು?
ಹೊಸ ಫ಼ಾರ್ಮ್ ಸಂಖ್ಯೆ 26ರ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
(i) ಹಿಂದಿನ ಮೂರು ಪರಿಶೋಧನಾ ಫ಼ಾರ್ಮ್ಸ್ (ಫ಼ಾರ್ಮ್ ಸಂಖ್ಯೆ 3CA, ಫ಼ಾರ್ಮ್ ಸಂಖ್ಯೆ 3CB ಮತ್ತು ಫ಼ಾರ್ಮ್ ಸಂಖ್ಯೆ 3CD) ಅನ್ನು ಒಂದೇ ಸ್ಮಾರ್ಟ್ ಹಾಗೂ ಏಕೀಕೃತ ಫ಼ಾರ್ಮ್ನಲ್ಲಿ ವಿಲೀನಗೊಳಿಸಲಾಗಿದ್ದು, ರಚನಾತ್ಮಕ ಮತ್ತು ಪ್ರಮಾಣಿತ ವರದಿಗೊಳಿಸುವಿಕೆ (standardised reporting) ವ್ಯವಸ್ಥೆ ಅಳವಡಿಸಲಾಗಿದೆ.
(ii) ಪರಿಶೋಧನಾ ಕ್ಲಾಜ್ಗಳು ಮತ್ತು ಬಹಿರಂಗಪಡಿಸುವಿಕೆಗಳನ್ನು (disclosures) ಯುಕ್ತೀಕರಿಸಿ, ಆದಾಯ ರಿಟರ್ನ್ (ITR) ಚೌಕಟ್ಟಿಗೆ ಹೊಂದುವಂತೆ ಸಮನ್ವಯಗೊಳಿಸಲಾಗಿದೆ, ಇದರಿಂದ ಪರಿಶೋಧನಾ ವರದಿ ಮತ್ತು ರಿಟರ್ನ್ ನಡುವಿನ ಏಕತೆ ಖಚಿತವಾಗುತ್ತದೆ.
(iii) ಕಡಿತಗೊಳ್ಳಬಹುದಾದ ವೆಚ್ಚಗಳಿಗೆ ಸಂಬಂಧಿಸಿದ ವಿಧಿಯನ್ನು ವಿವರವಾದ ಐಟಂ-ವಾರು ವರದಿಗಿಂತ ಬದಲಾಗಿ ಒಂದೇ ಏಕೀಕೃತ ಬಹಿರಂಗಪಡಿಸುವಿಕೆಯಾಗಿ ಸರಳಗೊಳಿಸಲಾಗಿದೆ.
(iv) ಹೆಚ್ಚಿನ ಪಾರದರ್ಶಕತೆಯಿಗಾಗಿ ನಷ್ಟಗಳು, ಇಳಿತಾಯ(Depreciation) ಮತ್ತು ಕಡಿತಗಳು, ಹಿಂದಿನ ಅವಧಿಯ ವಿವರಗಳು, ಆದಾಯ/ಸ್ವೀಕೃತಿಗಳ ಲೆಕ್ಕಾಚಾರ, ವೆಚ್ಚಗಳ ಲೆಕ್ಕಾಚಾರ ಮುಂತಾದ ಪ್ರತ್ಯೇಕ ಅನುಸೂಚಿ(Schedule) ಸ್ವರೂಪಗಳನ್ನು ಸೇರಿಸಲಾಗಿದೆ.
(v) ಪರಿಶೋಧಕರ ಸದಸ್ಯತ್ವ ಸಂಖ್ಯೆ, ವ್ಯವಹಾರ ಸಂಸ್ಥೆ ನೋಂದಣಿ ಸಂಖ್ಯೆ ಹಾಗೂ UDIN
ಅನ್ನು ಕಡ್ಡಾಯವಾಗಿ ಬಹಿರಂಗಪಡಿಸುವ ವ್ಯವಸ್ಥೆ ಪರಿಚಯಿಸಲಾಗಿದೆ. ಜೊತೆಗೆ ಲಾಭ ಮತ್ತು ನಷ್ಠ ಖಾತೆಗಳಲ್ಲಿ ಪ್ರತಿಬಿಂಬಿಸದ ಬಂಡವಾಳ ಸ್ವೀಕೃತಿಗಳು ಮತ್ತು ಕಲ್ಪಿತ ಆದಾಯಗಳನ್ನು ವರದಿ ಮಾಡಲು ವಿಶೇಷ ಕ್ಷೇತ್ರಗಳನ್ನು ಸೇರಿಸಲಾಗಿದೆ.
32. ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಧಾರ್ಮಿಕ/ಧಾರ್ಮಿಕೇತರ ಸೇವಾ ಸಂಸ್ಥೆಗೆ ನೀಡಲಾದ ತಾತ್ಕಾಲಿಕ ಅನುಮೋದನೆ 01.04.2026 ನಂತರ ಮಾನ್ಯವಾಗಿರುತ್ತದೆಯೇ?
ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 536(2)(j)ರ ಪ್ರಕಾರ, ಆದಾಯ ತೆರಿಗೆ ಕಾಯ್ದೆ, 1961ರ ಯಾವುದೇ ವಿಧಾನದ ಅಡಿಯಲ್ಲಿ ನೀಡಲಾದ ಯಾವುದೇ ಅನುಮೋದನೆ ಅಥವಾ ಮಾನ್ಯತೆ, ಅದು 2025ರ ಕಾಯ್ದೆಯ ಸಂಬಂಧಿತ ನಿಬಂಧನೆಗಳಿಗೆ ವಿರುದ್ಧವಾಗಿಲ್ಲದ ಮಟ್ಟಿಗೆ, ಮುಂದುವರಿದು ಮಾನ್ಯವಾಗಿರುತ್ತದೆ.ಆದ್ದರಿಂದ, ಹಳೆಯ ಕಾಯ್ದೆಯ ಅಡಿಯಲ್ಲಿ ಧಾರ್ಮಿಕ/ಧಾರ್ಮಿಕೇತರ ಸೇವಾ ಸಂಸ್ಥೆಗೆ ನೀಡಲಾದ ತಾತ್ಕಾಲಿಕ ಅನುಮೋದನೆ, ಹೊಸ ಕಾಯ್ದೆ 01.04.2026ರಿಂದ ಜಾರಿಗೆ ಬಂದ ಕಾರಣ ಮಾತ್ರದಿಂದ ಅಮಾನ್ಯವಾಗುವುದಿಲ್ಲ.
33. 01.04.2026ರ ನಂತರ ಒಂದು ಧಾರ್ಮಿಕ/ಧಾರ್ಮಿಕೇತರ ಸೇವಾ ಸಂಸ್ಥೆ ತಾತ್ಕಾಲಿಕ ನೋಂದಣಿಗೆ ಅರ್ಜಿ ಸಲ್ಲಿಸಲು ಯಾವ ಫ಼ಾರ್ಮ್ ಅನ್ನು ಬಳಸಬೇಕು?
01.04.2026ರಂದು ಅಥವಾ ಅದರ ನಂತರ ಹೊಸದಾಗಿ ಸಲ್ಲಿಸಲಾದ ಎಲ್ಲಾ ಅರ್ಜಿಗಳು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತವೆ. ಆದ್ದರಿಂದ, 01.04.2026 ನಂತರ ಯಾವುದೇ ಧಾರ್ಮಿಕ/ಧಾರ್ಮಿಕೇತರ ಸೇವಾ ಸಂಸ್ಥೆ ತನ್ನ ತಾತ್ಕಾಲಿಕ ನೋಂದಣಿ ಅರ್ಜಿಯನ್ನು ಫ಼ಾರ್ಮ್ ಸಂಖ್ಯೆ 104ರಲ್ಲಿ (ಹಿಂದಿನ ಫ಼ಾರ್ಮ್ ಸಂಖ್ಯೆ 10Aಗೆ ಸಮಾನ) ಸಲ್ಲಿಸಬೇಕು.
34. ಹಣಕಾಸು ವರ್ಷ 2025–26ರಲ್ಲಿ ಸಲ್ಲಿಸಲಾದ ಮತ್ತು 31.03.2026ರಂದು ಬಾಕಿ ಇರುವ ನೋಂದಣಿ ಅರ್ಜಿಗಳಿಗೆ ಏನು ಆಗುತ್ತದೆ?
ಸೆಕ್ಷನ್ 536(2)(e)ರ ಪ್ರಕಾರ, ಅಂತಹ ಎಲ್ಲಾ ಅರ್ಜಿಗಳನ್ನು ಆದಾಯ ತೆರಿಗೆ ಕಾಯ್ದೆ, 1961ರ ನಿಬಂಧನೆಗಳ ಅಡಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದ್ದರಿಂದ, 01.04.2026ರಂದು ಹೊಸ ಕಾಯ್ದೆ ಜಾರಿಗೆ ಬಂದ ಕಾರಣ ಮಾತ್ರದಿಂದ ಹೊಸ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.
35. ಆದಾಯ ತೆರಿಗೆ ನಿಯಮಗಳು, 2026ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಹೊಸ ಫ಼ಾರ್ಮ್ ಸಂಖ್ಯೆ 104ರ ಪ್ರಮುಖ ವೈಶಿಷ್ಟ್ಯಗಳು ಯಾವುವು?
ಹೊಸ ಫ಼ಾರ್ಮ್ ಸಂಖ್ಯೆ 104ರ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
(i) ಫ಼ಾರ್ಮ್ ಸಂಖ್ಯೆ 104 ಅನ್ನು ಒಟ್ಟಾರೆಯಾಗಿ ಬಹಳಷ್ಟು ಸರಳಗೊಳಿಸಲಾಗಿದ್ದು, ಅದರ ಉದ್ದವನ್ನು ಗಮನಾರ್ಹವಾಗಿ ಕಡಿತಗೊಳಿಸಲಾಗಿದೆ.
(ii) ಆಸ್ತಿಗಳು ಮತ್ತು ಬಾಧ್ಯತೆಗಳ ವಿವರಗಳನ್ನು ಮುಖ್ಯ ಫ಼ಾರ್ಮ್ನಿಂದ ತೆಗೆದುಹಾಕಲಾಗಿದ್ದು, ಅರ್ಜಿದಾರರು ಆದಾಯ ರಿಟರ್ನ್ ಸಲ್ಲಿಸದಿದ್ದ ಸಂದರ್ಭಗಳಲ್ಲಿ ಮಾತ್ರ ಅವುಗಳನ್ನು ಅಪ್ಲೋಡ್ ಮಾಡಬೇಕು.
(iii) ಹಿಂದಿನ ಮೂರು ತೆರಿಗೆ ವರ್ಷಗಳ ಒಟ್ಟು ಆದಾಯದ ವಿಭಜನೆ ಹಾಗೂ ಧಾರ್ಮಿಕ ವೆಚ್ಚಗಳ ವಿವರಗಳನ್ನು ನೀಡುವ ಅವಶ್ಯಕತೆಯನ್ನು ಫ಼ಾರ್ಮ್ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
36. ಪೋರ್ಟಲ್ನ ಇ-ಸಲ್ಲಿಕೆ ಉಪಕರಣಗಳು ಹಳೆಯ ಮತ್ತು ಹೊಸ ಫ಼ಾರ್ಮ್ ಆವೃತ್ತಿಗಳನ್ನು ಒಂದೇ ಸಮಯದಲ್ಲಿ ಬೆಂಬಲಿಸುತ್ತವಯೇ?
ಹೌದು. ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಪರಿವರ್ತನಾ ಅವಧಿಯಲ್ಲಿ ಇ-ಸಲ್ಲಿಕೆ ಪೋರ್ಟಲ್ ಹಳೆಯ ಫ಼ಾರ್ಮ್ಸ್ (ಮೌಲ್ಯಮಾಪನ ವರ್ಷ 2026–27 ಮತ್ತು ಅದಕ್ಕಿಂತ ಹಿಂದಿನವುಗಳಿಗೆ) ಹಾಗೂ ಹೊಸ ಫ಼ಾರ್ಮ್ಸ್ (ತೆರಿಗೆ ವರ್ಷ 2026–27ರಿಂದ ಮುಂದಿನವುಗಳಿಗೆ) ಎರಡನ್ನೂ ಒಂದೇ ಸಮಯದಲ್ಲಿ ಬೆಂಬಲಿಸುವಂತೆ ಮಾಡಲಿದೆ. ತೆರಿಗೆದಾರರು ಸರಿಯಾದ ವರ್ಷವನ್ನು (ಮೌಲ್ಯಮಾಪನ ವರ್ಷ ಅಥವಾ ತೆರಿಗೆ ವರ್ಷ) ಆಯ್ಕೆ ಮಾಡುವುದನ್ನು ಖಚಿತಪಡಿಸಬೇಕು; ನಂತರ ಪೋರ್ಟಲ್ ಅವರಿಗೆ ಸೂಕ್ತವಾದ ಫ಼ಾರ್ಮ್ಗೆ ಮಾರ್ಗದರ್ಶನ ನೀಡುತ್ತದೆ.