ಮೇಲ್ಮನವಿಗಳು ಮತ್ತು ಪರಿಷ್ಕರಣೆಗಳು

Frequently Asked Questions

ಮೇಲ್ಮನವಿಗಳು ಮತ್ತು ಪರಿಷ್ಕರಣೆಗಳು – ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

1. ಆದಾಯ ತೆರಿಗೆ ಕಾಯಿದೆ, 2025 ರಲ್ಲಿನ ಮೇಲ್ಮನವಿ, ಪರಿಷ್ಕರಣೆ ಮತ್ತು ವಿವಾದ ಪರಿಹಾರ ಸಮಿತಿ (DRC) ಕುರಿತ ಅಧ್ಯಾಯದಲ್ಲಿ ಯಾವ ಪ್ರಮುಖ ವಿಧಿಗಳು ಒಳಗೊಂಡಿವೆ?

ಆದಾಯ ತೆರಿಗೆ ಕಾಯಿದೆ, 2025 ರಲ್ಲಿನ ಮೇಲ್ಮನವಿ, ಪರಿಷ್ಕರಣೆ ಮತ್ತು ಪರ್ಯಾಯ ವಿವಾದ ಪರಿಹಾರ ಕುರಿತ ಅಧ್ಯಾಯವು ಕಾಯಿದೆಯ ಸಂಪೂರ್ಣ ಪರಿಹಾರಾತ್ಮಕ ಚೌಕಟ್ಟನ್ನು ಸಮಗ್ರವಾಗಿ ಒಂದೇ ಕಡೆ ಒಗ್ಗೂಡಿಸುತ್ತದೆ.

ಇದು ಮೊದಲ ಮೇಲ್ಮನವಿಗಳನ್ನು ಜಂಟಿ ಆಯುಕ್ತ (ಮೇಲ್ಮನವಿ) ಮತ್ತು ಆಯುಕ್ತ (ಮೇಲ್ಮನವಿ) ಮುಂದೆ ಸಲ್ಲಿಸುವ ವ್ಯವಸ್ಥೆಯನ್ನು (ಸೆಕ್ಷನ್ 356–360), ಮೇಲ್ಮನವಿ ನ್ಯಾಯಮಂಡಳಿಗೆ ಮೇಲ್ಮನವಿಗಳನ್ನು (ಸೆಕ್ಷನ್ 361–364), ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಗಳನ್ನು (ಸೆಕ್ಷನ್ 365–368), ಹಾಗೂ ಮಿತಿಯ ಅವಧಿ (limitation), ಹಣಕಾಸು ಮಿತಿಗಳು (monetary limits) ಮತ್ತು ಮೇಲ್ಮನವಿಗಳ ಪರಿಣಾಮಗಳಿಗೆ ಸಂಬಂಧಿಸಿದ ಸಾಮಾನ್ಯ ವಿಧಿಗಳನ್ನು ಒಳಗೊಂಡಿದೆ.

ಇದರಲ್ಲಿ ಅಧಿಕಾರ ಹೊಂದಿದ ಪ್ರಾಧಿಕಾರದ ಪರಿಷ್ಕರಣಾ ಅಧಿಕಾರಗಳನ್ನು (ಸೆಕ್ಷನ್ 377–378), ವಿವಾದ ಪರಿಹಾರ ಸಮಿತಿ (DRC) ವ್ಯವಸ್ಥೆಯನ್ನು (ಸೆಕ್ಷನ್ 379), ಪೂರ್ವ ನಿರ್ಣಯ ಚೌಕಟ್ಟನ್ನು (ಪೂರ್ವನಿರ್ಣಯ ಮಂಡಳಿ), ಹಾಗೂ ಪುನರಾವರ್ತಿತ ವಾದಗಳನ್ನು ತಪ್ಪಿಸುವ ವ್ಯವಸ್ಥೆಯನ್ನು ಸೆಕ್ಷನ್ 375 ಮತ್ತು 376 ಮೂಲಕ ಕೂಡ ಸೇರಿಸಲಾಗಿದೆ.

2. ಆದಾಯ ತೆರಿಗೆ ಕಾಯಿದೆ, 2025 ರಲ್ಲಿನ ಮೇಲ್ಮನವಿ ಅಧಿಕಾರ ಶ್ರೇಣಿಯಲ್ಲಿ ಆದಾಯ ತೆರಿಗೆ ಕಾಯಿದೆ, 1961 ರೊಂದಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಇದೆಯೇ? ಮೇಲ್ಮನವಿ ಪ್ರಾಧಿಕಾರಗಳ ಅಧಿಕಾರಗಳಲ್ಲಿ ಅಥವಾ ಮೇಲ್ಮನವಿ ನಿರ್ಧಾರ ಮಾಡುವ ವಿಧಾನದಲ್ಲಿ ಯಾವುದೇ ಬದಲಾವಣೆ ಇದೆಯೇ?

ಇಲ್ಲ. ಆದಾಯ ತೆರಿಗೆ ಕಾಯಿದೆ, 2025 ಅಡಿಯಲ್ಲಿ ಮೇಲ್ಮನವಿ ಹಂತಕ್ರಮದಲ್ಲಿ ಯಾವುದೇ ರಚನಾತ್ಮಕ ಬದಲಾವಣೆ ಇಲ್ಲ. ಮೇಲ್ಮನವಿ ಪರಿಹಾರಗಳ ಚೌಕಟ್ಟು ಅದೇ ಕ್ರಮಬದ್ಧ ರೀತಿಯಲ್ಲಿ ಮುಂದುವರಿಯುತ್ತದೆ:

ಮೌಲ್ಯಮಾಪನ ಅಧಿಕಾರಿ → ಆದಾಯ ತೆರಿಗೆ ಜಂಟಿ ಆಯುಕ್ತ (JCIT(A)) (ಮೇಲ್ಮನವಿ)/ ಆದಾಯ ತರಿಗೆ ಆಯುಕ್ತ (CIT(A)(ಮೇಲ್ಮನವಿ)) → ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) → ಹೈಕೋರ್ಟ್ → ಸುಪ್ರೀಂ ಕೋರ್ಟ್

ಮೇಲ್ಮನವಿ ಪ್ರಾಧಿಕಾರಗಳ ಅಧಿಕಾರಗಳು — ಅಂದರೆ ಮೌಲ್ಯಮಾಪನವನ್ನು ದೃಢೀಕರಿಸುವುದು, ಕಡಿಮೆ ಮಾಡುವುದು, ಹೆಚ್ಚಿಸುವುದು ಅಥವಾ ರದ್ದುಪಡಿಸುವುದು, ಹೆಚ್ಚುವರಿ ಆಧಾರಗಳನ್ನು ಸ್ವೀಕರಿಸುವುದು, ಮರುಪರಿಶೀಲನಾ ವರದಿಯನ್ನು (remand report) ಕೇಳುವುದು, ತಪ್ಪುಗಳನ್ನು ಸರಿಪಡಿಸುವುದು, ಷರತ್ತುಗಳಿಗೆ ಒಳಪಟ್ಟಂತೆ ತಾತ್ಕಾಲಿಕ ತಡೆ ನೀಡುವುದು ಇತ್ಯಾದಿ — ಮೂಲಭೂತವಾಗಿ ಬದಲಾಗಿಲ್ಲ. ಪ್ರಕ್ರಿಯಾತ್ಮಕ ಚೌಕಟ್ಟೂ ಕೂಡ ಅದೇ ರೀತಿಯಲ್ಲಿ ಮುಂದುವರಿಯುತ್ತದೆ.

3. ಹೊಸ ಆದಾಯ ತೆರಿಗೆ ಕಾಯಿದೆ, 2025 ರಲ್ಲಿ ಮೇಲ್ಮನವಿ ಸಲ್ಲಿಸುವ ಮಿತಿಯ ಅವಧಿ (limitation period) ಆದಾಯ ತೆರಿಗೆ ಕಾಯಿದೆ, 1961 ರೊಂದಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಇದೆಯೇ?

ಆದಾಯ ತೆರಿಗೆ ಕಾಯಿದೆ, 2025 ರಲ್ಲಿ ಮೇಲ್ಮನವಿ ಸಲ್ಲಿಸುವ ಮಿತಿಯ ಅವಧಿ (limitation period) ಆದಾಯ ತೆರಿಗೆ ಕಾಯಿದೆ, 1961 ರೊಂದಿಗೆ ಹೋಲಿಸಿದರೆ ಬದಲಾಗಿಲ್ಲ.

4. 01.04.2026 ರಂದು CIT(A) ಮುಂದೆ ಮೇಲ್ಮನವಿ ಬಾಕಿ ಇದ್ದರೆ, ಅದು ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ ಅಥವಾ ಆದಾಯ ತೆರಿಗೆ ಕಾಯಿದೆ, 2025 ಅಡಿಯಲ್ಲಿ ನಿರ್ಧರಿಸಲಾಗುತ್ತದೆಯೇ? ನಾನು ಹೊಸ ಮೇಲ್ಮನವಿ ಸಲ್ಲಿಸಬೇಕಾಗುತ್ತದೆಯೇ?

ಹೊಸ ಕಾಯಿದೆಯ ಸೆಕ್ಷನ್ 536(2)(e) ಪ್ರಕಾರ, ಯಾವುದೇ ಆದಾಯ ತೆರಿಗೆ ಪ್ರಾಧಿಕಾರ, ಮೇಲ್ಮನವಿ ನ್ಯಾಯಮಂಡಳಿ ಅಥವಾ ನ್ಯಾಯಾಲಯದ ಮುಂದೆ ಬಾಕಿ ಇರುವ ಯಾವುದೇ ಪ್ರಕ್ರಿಯೆಯನ್ನು ಈ ಕಾಯಿದೆ ಜಾರಿಗೆ ಬಂದಿಲ್ಲವೆಂದು ಪರಿಗಣಿಸಿ ಮುಂದುವರಿಸಿ ನಿರ್ಧರಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ, ಬಾಕಿ ಇರುವ ಮೇಲ್ಮನವಿ ಆದಾಯ ತೆರಿಗೆ ಕಾಯಿದೆ, 1961 ರ ವಿಧಿಗಳ ಪ್ರಕಾರವೇ ಮುಂದುವರಿಯುತ್ತದೆ ಮತ್ತು ನಿರ್ಧಾರವಾಗುತ್ತದೆ. ಹೊಸ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ

5. 1 ಏಪ್ರಿಲ್ 2026 ನಂತರ ಮೌಲ್ಯಮಾಪನ ವರ್ಷ 2026–27 ಅಥವಾ ಯಾವುದೇ ಹಿಂದಿನ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಮೇಲ್ಮನವಿ ಸಲ್ಲಿಸಿದರೆ, ಅದು ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ ಅಥವಾ ಆದಾಯ ತೆರಿಗೆ ಕಾಯಿದೆ, 2025 ಅಡಿಯಲ್ಲಿ ನಿಯಂತ್ರಿಸಲ್ಪಡುತ್ತದೆಯೇ?

ಸೆಕ್ಷನ್ 536(2)(c) ಪ್ರಕಾರ, 1 ಏಪ್ರಿಲ್ 2026 ಕ್ಕಿಂತ ಮುಂಚೆ ಆರಂಭವಾದ ತೆರಿಗೆ ವರ್ಷಗಳಿಗೆ ಸಂಬಂಧಿಸಿದಂತೆ 1 ಏಪ್ರಿಲ್ 2026 ನಂತರ ಆರಂಭವಾಗುವ ಯಾವುದೇ ಪ್ರಕ್ರಿಯೆಗಳನ್ನು ರದ್ದುಪಡಿಸಲಾದ ಕಾಯಿದೆಯ ವಿಧಿಗಳ ಪ್ರಕಾರವೇ ನಡೆಸಬೇಕು. ಅದರಂತೆ, ಆದಾಯ ತೆರಿಗೆ ಕಾಯಿದೆ, 2025 ಜಾರಿಗೆ ಬಂದ ನಂತರ ಮೇಲ್ಮನವಿ ಸಲ್ಲಿಸಿದರೂ, ಅದು ಮೌಲ್ಯಮಾಪನ ವರ್ಷ 2026–27 ಅಥವಾ ಅದಕ್ಕೂ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದರೆ, ಆ ಮೇಲ್ಮನವಿಯನ್ನು ಆದಾಯ ತೆರಿಗೆ ಕಾಯಿದೆ, 1961 ರ ವಿಧಿಗಳ ಪ್ರಕಾರವೇ ನಿರ್ವಹಿಸಿ ನಿರ್ಧರಿಸಲಾಗುತ್ತದೆ.

6. ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವ ಮಿತಿಯ ಅವಧಿ (limitation) ಮುಗಿದಿದ್ದರೆ, ಅದನ್ನು ಆದಾಯ ತೆರಿಗೆ ಕಾಯಿದೆ, 2025 ಅಡಿಯಲ್ಲಿ ಪುನರುಜ್ಜೀವನಗೊಳಿಸಬಹುದೇ?

ಇಲ್ಲ. ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 536(2)(k) ಪ್ರಕಾರ, ಹೊಸ ಕಾಯಿದೆ ಜಾರಿಗೆ ಬರುವ ಮೊದಲು ಮೇಲ್ಮನವಿ, ಪರಿಷ್ಕರಣೆ ಅಥವಾ ರೆಫರೆನ್ಸ್ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿದ್ದರೆ, ಹೊಸ ಕಾಯಿದೆಯಲ್ಲಿ ಬೇರೆ ಅಥವಾ ವಿಸ್ತೃತ ಮಿತಿಯ ಅವಧಿ ಇದ್ದರೂ ಆ ಹಕ್ಕನ್ನು ಪುನರುಜ್ಜೀವನಗೊಳಿಸಲಾಗುವುದಿಲ್ಲ.

ಆದರೆ, ಸೂಕ್ತ ಜಾಗರೂಕತೆ (due diligence) ಇದ್ದರೂ ಸಮಯಕ್ಕೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ತೆರಿಗೆದಾರರು ಸಾಬೀತುಪಡಿಸಿದರೆ, ಹಳೆಯ ಕಾಯಿದೆಯಡಿ ವಿಳಂಬವನ್ನು ಮನ್ನಿಸುವ (condonation of delay) ಪ್ರಕ್ರಿಯಾತ್ಮಕ ಪರಿಹಾರ ಇನ್ನೂ ಲಭ್ಯವಾಗಬಹುದು. ಆದರೆ ವಿಳಂಬವು ಗಂಭೀರ ನಿರ್ಲಕ್ಷ್ಯದಿಂದ ಆಗಿದ್ದರೆ ಅಥವಾ ಸಮರ್ಪಕ ಕಾರಣವನ್ನು ತೋರಿಸಲಾಗದಿದ್ದರೆ, ವಿಳಂಬವನ್ನು ಮನ್ನಿಸುವ ಅರ್ಜಿಯನ್ನು ತಿರಸ್ಕರಿಸಬಹುದು.

7. ಮೌಲ್ಯಮಾಪನ ವರ್ಷ 2024–25 ಗೆ ಸಂಬಂಧಿಸಿದಂತೆ ಆಯುಕ್ತ (ಮೇಲ್ಮನವಿ) ನೀಡಿದ ಮೇಲ್ಮನವಿ ಆದೇಶದ ತಿದ್ದುಪಡಿ ಅನ್ನು 1 ಏಪ್ರಿಲ್ 2026 ನಂತರ ಕೇಳಿದರೆ, ಅದು ಯಾವ ಕಾಯಿದೆಯಡಿ ನಿಯಂತ್ರಿಸಲ್ಪಡುತ್ತದೆ?

ತಿದ್ದುಪಡಿ (rectification) ಆದಾಯ ತೆರಿಗೆ ಕಾಯಿದೆ, 1961 ರ ಸಂಬಂಧಿತ ವಿಧಿಯಡಿ ಮುಂದುವರಿಯುತ್ತದೆ. ತಿದ್ದುಪಡಿ ಮೂಲ ಮೇಲ್ಮನವಿ ಪ್ರಕ್ರಿಯೆಯ ಮುಂದುವರಿಕೆಯಾಗಿದೆ. ಸೆಕ್ಷನ್ 536(2)(c) ಮತ್ತು (e) ಪ್ರಕಾರ, 01.04.2026 ಕ್ಕಿಂತ ಮುಂಚೆ ಆರಂಭವಾದ ತೆರಿಗೆ ವರ್ಷಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು—ತಿದ್ದುಪಡಿ ಮತ್ತು ಮಿತಿಯ ಅವಧಿ ಸೇರಿ—ಆದಾಯ ತೆರಿಗೆ ಕಾಯಿದೆ, 1961 ರ ಚೌಕಟ್ಟಿನಲ್ಲಿಯೇ ಮುಂದುವರಿಯಬೇಕು.

8. 01.04.2026 ರಂದು ಹಣಕಾಸು ವರ್ಷ 2025–26 ಕ್ಕೆ ಸಂಬಂಧಿಸಿದ ಮೇಲ್ಮನವಿ ಬಾಕಿ ಇದ್ದರೆ, ಆ ಮೇಲ್ಮನವಿಯನ್ನು JCIT(A) ಯಿಂದ CIT(A) ಗೆ ಅಥವಾ ಅದರ ವಿರುದ್ಧವಾಗಿ ವರ್ಗಾಯಿಸಬಹುದೇ?

ಹೌದು. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 246(2) ಮತ್ತು 246(3) ಅಡಿಯಲ್ಲಿ ನೀಡಿರುವಂತೆ, ಇಂತಹ ಮೇಲ್ಮನವಿಗಳನ್ನು JCIT(A) ಯಿಂದ CIT(A) ಗೆ ಅಥವಾ CIT(A) ಯಿಂದ JCIT(A) ಗೆ ವರ್ಗಾಯಿಸಬಹುದು. ಹೊಸ ಕಾಯಿದೆಯಲ್ಲಿನ ಸಂಬಂಧಿತ ವಿಧಿಗಳು ಸೆಕ್ಷನ್ 356(3)(a) ಮತ್ತು ಸೆಕ್ಷನ್ 356(3)(b) ಆಗಿವೆ.

9. 01.04.2026 ರಂದು ಅಥವಾ ನಂತರ ಮೌಲ್ಯಮಾಪನ ವರ್ಷ 2023–24 ಕ್ಕೆ ಸಂಬಂಧಿಸಿದಂತೆ ITAT ಮೂಲಕ ಪ್ರಕರಣವನ್ನು ಮರುಪರಿಶೀಲನೆಗಾಗಿ (remand) ಹಿಂದಿರುಗಿಸಿದರೆ, ಆ ಮರುಪರಿಶೀಲನಾ ಪ್ರಕ್ರಿಯೆ ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ ನಡೆಯುತ್ತದೆಯೇ ಅಥವಾ ಆದಾಯ ತೆರಿಗೆ ಕಾಯಿದೆ, 2025 ಅಡಿಯಲ್ಲಿ ನಡೆಯುತ್ತದೆಯೇ?

ITAT 01.04.2026 ರಂದು ಅಥವಾ ನಂತರ AY 2023–24 ಗೆ ಸಂಬಂಧಿಸಿದಂತೆ ಪ್ರಕರಣವನ್ನು ಮರುಪರಿಶೀಲನೆಗಾಗಿ (remand) ಹಿಂದಿರುಗಿಸಿದರೆ, ಆ ಮರುಪರಿಶೀಲನಾ ಪ್ರಕ್ರಿಯೆ ಆದಾಯ ತೆರಿಗೆ ಕಾಯಿದೆ, 1961 ರಡಿಯಲ್ಲಿಯೇ ಮುಂದುವರಿಯುತ್ತದೆ. ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 536(2)(c) ಮತ್ತು (e) ಸ್ಪಷ್ಟವಾಗಿ ಹೇಳುತ್ತದೆ: 01.04.2026 ಕ್ಕಿಂತ ಮುಂಚೆ ಆರಂಭವಾದ ತೆರಿಗೆ ವರ್ಷಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಹೊಸ ಕಾಯಿದೆ ಜಾರಿಗೆ ಬಂದಿಲ್ಲವೆಂದು ಪರಿಗಣಿಸಿ ರದ್ದುಪಡಿಸಲಾದ ಕಾಯಿದೆಯಡಿಯಲ್ಲಿಯೇ ಮುಂದುವರಿಯಬೇಕು ಮತ್ತು ನಿರ್ಧರಿಸಬೇಕು. ITAT ನೀಡುವ ಮರುಪರಿಶೀಲನೆಗಾಗಿನ ಆದೇಶವು ಮೂಲ ಮೌಲ್ಯಮಾಪನ ಪ್ರಕ್ರಿಯೆಯ ಮುಂದುವರಿಕೆಯಷ್ಟೇ ಆಗಿದ್ದು, ಹೊಸ ಕಾಯಿದೆಯಡಿ ಹೊಸ ಕಾರಣವನ್ನು (fresh cause) ಸೃಷ್ಟಿಸುವುದಿಲ್ಲ. ಆದ್ದರಿಂದ ಮೌಲ್ಯಮಾಪನ ಅಧಿಕಾರಿ "ಕಾರ್ಯರೂಪಕ್ಕೆ ತರಲು" (giving effect) ನೀಡುವ ಆದೇಶವನ್ನು ಸಂಪೂರ್ಣವಾಗಿ ಆದಾಯ ತೆರಿಗೆ ಕಾಯಿದೆ, 1961 ರ ಪ್ರಕ್ರಿಯಾತ್ಮಕ ಮತ್ತು ಮೂಲಭೂತ ವಿಧಿಗಳ ಪ್ರಕಾರವೇ ನೀಡಬೇಕು.

10. ಮೌಲ್ಯಮಾಪನ ವರ್ಶ 2024–25 ಕ್ಕೆ ಸಂಬಂಧಿಸಿದಂತೆ, 30.03.2025 ರಂದು ಸ್ವೀಕರಿಸಿದ ಮೌಲ್ಯಮಾಪನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಯಾವ ಕಾಯಿದೆಯಡಿ ನಿಯಂತ್ರಿಸಲ್ಪಡುತ್ತದೆ, ಮತ್ತು ಅನ್ವಯಿಸುವ ಮಿತಿಯ ಅವಧಿ (limitation period) ಏನು?

ಮೌಲ್ಯಮಾಪನ ಆದೇಶವು ಮೌಲ್ಯಮಾಪನ ವರ್ಷ 2024–25 ಗೆ ಸಂಬಂಧಿಸಿದ್ದರಿಂದ, ಮೇಲ್ಮನವಿ ಆದಾಯ ತೆರಿಗೆ ಕಾಯಿದೆ, 1961 ರಡಿಯಲ್ಲಿಯೇ ನಿಯಂತ್ರಿಸಲ್ಪಡುತ್ತದೆ ಮತ್ತು ಹೊಸ ಕಾಯಿದೆ ಜಾರಿಗೆ ಬಂದ ನಂತರವೂ ಅದನ್ನು ಸಲ್ಲಿಸಬಹುದು. ಮೇಲ್ಮನವಿಯನ್ನು ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ, 1961 ರ ಕಾಯಿದೆಯಲ್ಲಿ ನಿಗದಿಪಡಿಸಿದ ಮಿತಿಯ ಅವಧಿಯೊಳಗೆ ಸಲ್ಲಿಸಬೇಕು.

11. ಹೊಸ ಕಾಯಿದೆ ಜಾರಿಗೆ ಬಂದಾಗ ನ್ಯಾಯಾಲಯಗಳು, ಟ್ರಿಬ್ಯುನಲ್ ಅಥವಾ ಆಯುಕ್ತ (ಮೇಲ್ಮನವಿ) ಮುಂದೆ ಬಾಕಿ ಇರುವ ಮೇಲ್ಮನವಿಗಳಿಗೆ ಏನಾಗುತ್ತದೆ?

ಇಂತಹ ಮೇಲ್ಮನವಿಗಳು ಹಳೆಯ ಕಾಯಿದೆಯಡಿಯಲ್ಲಿಯೇ ಮುಂದುವರಿಯುತ್ತವೆ ಮತ್ತು ಹಳೆಯ ಕಾಯಿದೆಯ ವಿಧಿಗಳ ಪ್ರಕಾರವೇ ನಿರ್ಧಾರಗೊಳ್ಳುತ್ತವೆ.
ಉದಾಹರಣೆಗೆ, ತೆರಿಗೆದಾರನಿಗೆ AY 2021–22 ಗೆ ಸಂಬಂಧಿಸಿದಂತೆ Income Tax Appellate Tribunal ಮುಂದೆ ಮೇಲ್ಮನವಿ ಬಾಕಿ ಇದ್ದರೆ, ಆ ಮೇಲ್ಮನವಿಯನ್ನು ಹೊಸ ಕಾಯಿದೆಯ ಬದಲು ಹಳೆಯ ಕಾಯಿದೆಯ ವಿಧಿಗಳನ್ನು ಅನ್ವಯಿಸಿ ನಿರ್ಧರಿಸಲಾಗುತ್ತದೆ.

12. ಒಂದೇ ರೀತಿಯ ಕಾನೂನು ಪ್ರಶ್ನೆಗಳ ಮೇಲೆ ಪುನರಾವರ್ತಿತ ಮೇಲ್ಮನವಿಗಳನ್ನು ತಪ್ಪಿಸಲು ಆದಾಯ ತೆರಿಗೆ ಕಾಯಿದೆ, 1961 ರಲ್ಲಿ ಯಾವ ಕಾನೂನು ಕ್ರಮಗಳು ಇದ್ದವು, ಮತ್ತು ಅವುಗಳನ್ನು ಆದಾಯ ತೆರಿಗೆ ಕಾಯಿದೆ, 2025 ರಲ್ಲಿ ಹೇಗೆ ಮರುಸಂರಚಿಸಲಾಗಿದೆ?

ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ, ಒಂದೇ ರೀತಿಯ ಕಾನೂನು ಪ್ರಶ್ನೆಗಳ ಮೇಲೆ ಪುನರಾವರ್ತಿತ ವಾದವನ್ನು ತಪ್ಪಿಸುವ ವ್ಯವಸ್ಥೆಯನ್ನು ಎರಡು ವಿಭಿನ್ನ ವಿಧಿಗಳು ನಿಯಂತ್ರಿಸುತ್ತಿದ್ದವು, ಅಂದರೆ ಸೆಕ್ಷನ್ 158A ಮತ್ತು ಸೆಕ್ಷನ್ 158AB. ಸೆಕ್ಷನ್ 158A ತೆರಿಗೆದಾರ-ಚಾಲಿತ ವ್ಯವಸ್ಥೆಯನ್ನು ಒದಗಿಸುತ್ತಿತ್ತು. ಇದರಡಿ ತೆರಿಗೆದಾರರು, ಒಂದೇ ರೀತಿಯ ಕಾನೂನು ಪ್ರಶ್ನೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇದೆ ಎಂದು ಘೋಷಿಸಿ, ಆ ಅಂತಿಮ ತೀರ್ಪನ್ನು ಒಪ್ಪಿಕೊಳ್ಳಲು ಒಪ್ಪಿಕೊಳ್ಳಬಹುದು. ಮತ್ತೊಂದೆಡೆ, ಸೆಕ್ಷನ್ 158AB ಇಲಾಖಾ ಸಮೂಹ (departmental collegium) ಗೆ ಅದೇ ಕಾನೂನು ಪ್ರಶ್ನೆ ಈಗಾಗಲೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇದ್ದರೆ ಮೇಲ್ಮನವಿ ಸಲ್ಲಿಕೆಯನ್ನು ಮುಂದೂಡುವ ಅವಕಾಶ ನೀಡುತ್ತಿತ್ತು. ಆದಾಯ ತೆರಿಗೆ ಕಾಯಿದೆ, 2025 ರಲ್ಲಿ ಈ ಎರಡು ವ್ಯವಸ್ಥೆಗಳನ್ನು ಕ್ರಮವಾಗಿ ಸೆಕ್ಷನ್ 375 ಮತ್ತು 376 ಅಡಿಯಲ್ಲಿ ಮರುಸಂರಚಿಸಲಾಗಿದೆ. ಹೀಗಾಗಿ, ಹಿಂದಿನ ಚೌಕಟ್ಟನ್ನು ಬದಲಿಸದೆ ಅದನ್ನು ಸರಳಗೊಳಿಸಲಾಗಿದೆ.

13. ಆದಾಯ ತೆರಿಗೆ ಕಾಯಿದೆ, 2025 ರಲ್ಲಿ ಈ ವ್ಯವಸ್ಥೆಯನ್ನು (mechanism) ಬಳಸಲು ಇರುವ ಆರಂಭಿಕ ಷರತ್ತು (trigger condition) ಆದಾಯ ತೆರಿಗೆ ಕಾಯಿದೆ, 1961 ರೊಂದಿಗೆ ಹೋಲಿಸಿದರೆ ಬದಲಾಗಿದೆಯೇ?

ಇಲ್ಲ. ಮೂಲಭೂತ ಆರಂಭಿಕ ಷರತ್ತು (trigger condition) ಎರಡೂ ಕಾಯಿದೆಗಳಲ್ಲಿಯೂ ಒಂದೇ ಆಗಿದೆ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 158A ಮತ್ತು 158AB ಅಡಿಯಲ್ಲಿ, ಒಂದೇ ರೀತಿಯ ಕಾನೂನು ಪ್ರಶ್ನೆ (identical question of law) ಉದ್ಭವವಾಗಿದ್ದು, ಅದೇ ಪ್ರಶ್ನೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇದ್ದಾಗ ಮಾತ್ರ ಈ ವ್ಯವಸ್ಥೆಯನ್ನು ಬಳಸಬಹುದು. ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 375 ಮತ್ತು 376 ಕೂಡ ಇದೇ ಮೂಲ ಅಗತ್ಯವನ್ನು ಮುಂದುವರಿಸುತ್ತವೆ—ಅಂದರೆ ಕಾನೂನು ಪ್ರಶ್ನೆಯ ಸಮಾನತೆ ಮತ್ತು ಅದು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇರುವ ಸ್ಥಿತಿ. ಹೆಚ್ಚುವರಿಯಾಗಿ, 2025 ರ ಕಾಯಿದೆ ಪ್ರಕಾರ ಆ ಬಾಕಿ ಇರುವ ಪ್ರಕರಣವು ಆದಾಯ ತೆರಿಗೆ ಕಾಯಿದೆ, 1961 ಅಥವಾ 2025 ಯಾವುದಾದರೂ ಕಾಯಿದೆಯಡಿ ಇರಬಹುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಇದರಿಂದ ಕಾನೂನು ಬದಲಾವಣೆಯ ನಡುವೆಯೂ ನಿರಂತರತೆ ಕಾಯ್ದುಕೊಳ್ಳಲಾಗುತ್ತದೆ.

14. ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಸೆಕ್ಷನ್ 158A ಮತ್ತು 158AB ಅನ್ನು ಯಾವ ಹಂತದಲ್ಲಿ ಬಳಸಬಹುದಿತ್ತು, ಮತ್ತು ಆದಾಯ ತೆರಿಗೆ ಕಾಯಿದೆ, 2025 ರಲ್ಲಿ ಅದರ ಕಾರ್ಯಗತಗೊಳ್ಳುವ ಹಂತದಲ್ಲಿ ಯಾವುದೇ ಬದಲಾವಣೆ ಇದೆಯೇ?

ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ, ಸೆಕ್ಷನ್ 158A ಅನ್ನು ಮೌಲ್ಯಮಾಪನ ಅಥವಾ ಮೇಲ್ಮನವಿ ಪ್ರಕ್ರಿಯೆಗಳ ಸಮಯದಲ್ಲಿ, ವಿಷಯವು ಮೌಲ್ಯಮಾಪನ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರದ ಮುಂದೆ ಬಾಕಿ ಇದ್ದಾಗ ಬಳಸಬಹುದಿತ್ತು. ಮತ್ತೊಂದೆಡೆ, ಸೆಕ್ಷನ್ 158AB ಯನ್ನು ಆಯುಕ್ತ (ಮೇಲ್ಮನವಿ) ಅಥವಾ ನ್ಯಾಯಮಂಡಳಿ ಆದೇಶದ ವಿರುದ್ಧ ಇಲಾಖೆ ಮುಂದಿನ ಮೇಲ್ಮನವಿ ಸಲ್ಲಿಸಬೇಕೇ ಎಂಬ ನಿರ್ಧಾರ ಹಂತದಲ್ಲಿ ಬಳಸಲಾಗುತ್ತಿತ್ತು. ಆದಾಯ ತೆರಿಗೆ ಕಾಯಿದೆ, 2025 ಕೂಡ ಅದೇ ರಚನಾತ್ಮಕ ಸ್ಥಾನವನ್ನು ಉಳಿಸಿಕೊಂಡಿದೆ. ಸೆಕ್ಷನ್ 375 ತೆರಿಗೆದಾರ-ಚಾಲಿತ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು ಮೌಲ್ಯಮಾಪನ ಅಥವಾ ಮೇಲ್ಮನವಿ ಹಂತದಲ್ಲಿ ಅನ್ವಯಿಸುತ್ತದೆ. ಸೆಕ್ಷನ್ 376 ಕೊಲೇಜಿಯಂ ಆಧಾರಿತ ವ್ಯವಸ್ಥೆಯನ್ನು ಒದಗಿಸುತ್ತದೆ, ಇದು ಮುಂದಿನ ಮೇಲ್ಮನವಿ ಸಲ್ಲಿಸುವ ಹಂತದಲ್ಲಿ ಅನ್ವಯಿಸುತ್ತದೆ. ಹೀಗಾಗಿ, ಈ ವ್ಯವಸ್ಥೆಗಳನ್ನು ಬಳಸುವ ಹಂತಗಳಲ್ಲಿ ಯಾವುದೇ ಬದಲಾವಣೆ ಇಲ್ಲ; ಅವು ಹಿಂದಿನ ಕಾಯಿದೆಯಂತೆಯೇ ಮುಂದುವರಿಯುತ್ತವೆ.

15. ಮೇಲ್ಮನವಿಯನ್ನು ಮುಂದೂಡುವ (deferral of appeal) ವಿಷಯದಲ್ಲಿ ಎರಡೂ ಕಾಯಿದೆಗಳ ಅಡಿಯಲ್ಲಿ ತೆರಿಗೆದಾರರ ಒಪ್ಪಿಗೆ ಅಗತ್ಯವಿದೆಯೇ?

ಹೌದು, ಎರಡೂ ಕಾಯಿದೆಗಳಲ್ಲಿಯೂ ತೆರಿಗೆದಾರರ ಒಪ್ಪಿಗೆಯ (assessee acceptance) ತತ್ತ್ವ ಮುಂದುವರಿಯುತ್ತದೆ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 158A ಅಡಿಯಲ್ಲಿ, ತೆರಿಗೆದಾರರು ಒಂದೇ ರೀತಿಯ ಕಾನೂನು ಪ್ರಶ್ನೆಗೆ ಸಂಬಂಧಿಸಿದಂತೆ ಅಂತಿಮ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಘೋಷಣೆ ನೀಡಬೇಕಾಗಿತ್ತು. ಅದೇ ರೀತಿ ಸೆಕ್ಷನ್ 158AB ಅಡಿಯಲ್ಲಿ ಕೂಡ, ಪ್ರಶ್ನೆಯ ಸಮಾನತೆಯನ್ನು ಒಪ್ಪಿಕೊಳ್ಳುವ ಅಂಶವು ಮೇಲ್ಮನವಿ ಮುಂದೂಡುವ ಮೊದಲು ಅಗತ್ಯವಾಗಿತ್ತು. ಆದಾಯ ತೆರಿಗೆ ಕಾಯಿದೆ, 2025 ರಲ್ಲಿಯೂ ಇದೇ ತತ್ತ್ವ ಮುಂದುವರಿಯುತ್ತದೆ. ಸೆಕ್ಷನ್ 375 ತೆರಿಗೆದಾರರ ಘೋಷಣೆಯ (declaration) ಮೇಲೆ ಆಧಾರಿತವಾಗಿದೆ ಮತ್ತು ಸೆಕ್ಷನ್ 376 ಅಡಿಯಲ್ಲಿ ಕೂಡ ಕಾನೂನು ಪ್ರಶ್ನೆಯ ಸಮಾನತೆಯ ಬಗ್ಗೆ ಒಪ್ಪಿಗೆ ಅಗತ್ಯವಿರುತ್ತದೆ. ಆದ್ದರಿಂದ ಈ ವಿಷಯದಲ್ಲಿ ಯಾವುದೇ ಮೂಲಭೂತ ಬದಲಾವಣೆ ಇಲ್ಲ.

16. ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ವಿವಾದ ಪರಿಹಾರ ಸಮಿತಿ (DRC) ಚೌಕಟ್ಟಿನಲ್ಲಿ ಪ್ರಮುಖ ಬದಲಾವಣೆಗಳಾಗಿದೆಯೇ?

ಯಾವುದೇ ಪ್ರಮುಖ ರಚನಾತ್ಮಕ ಬದಲಾವಣೆಗಳು (substantive structural change) ವಿವಾದ ಪರಿಹಾರ ಸಮಿತಿ (DRC) ಚೌಕಟ್ಟಿನಲ್ಲಿ ಮಾಡಲಾಗಿಲ್ಲ. ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 379, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 245MA ಅನ್ನು ಬಹುತೇಕ ಪುನರ್‌ಪ್ರತಿಪಾದಿಸುತ್ತದೆ. ಉದ್ದೇಶ, ಅರ್ಹತಾ ಮಾನದಂಡಗಳು, ಹಣಕಾಸು ಮಿತಿಗಳು (ವ್ಯತ್ಯಾಸ ₹10 ಲಕ್ಷಕ್ಕಿಂತ ಕಡಿಮೆ; ರಿಟರ್ನ್ ಆದಾಯ ₹50 ಲಕ್ಷಕ್ಕಿಂತ ಕಡಿಮೆ), ಹಾಗೂ ದಂಡ ವಿನಾಯಿತಿ ಮತ್ತು ಕಾನೂನು ಕ್ರಮ ಜರುಗಿಸುವುದರಿಂದ ರಕ್ಷಣೆ ನೀಡುವ ಅಧಿಕಾರ, ಇವುಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಇಲ್ಲ. ವಿವಾದ ಪರಿಹಾರ ಸಮಿತಿಯಿಂದ ಹೊರಗಿಡಲ್ಪಡುವ ವ್ಯಕ್ತಿಗಳ ವರ್ಗಗಳೂ (excluded categories) ಅದೇ ರೀತಿಯಲ್ಲಿವೆ. ಮುಖ್ಯ ಬದಲಾವಣೆಗಳು ಕೇವಲ ವಿಧಿಗಳ ಸ್ಥಾನ, ಭಾಷಾ ಸ್ಪಷ್ಟತೆ ಮತ್ತು ಸೆಕ್ಷನ್ ಮರುಸಂಖ್ಯೀಕರಣಕ್ಕೆ (renumbering) ಸಂಬಂಧಿಸಿದವು.

17. ಆದಾಯ ತೆರಿಗೆ ಕಾಯಿದೆ, 2025 ಅಡಿಯಲ್ಲಿ ವಿವಾದ ಪರಿಹಾರ ಸಮಿತಿ (DRC) ಯ ಅಧಿಕಾರಗಳು ಯಾವುವು?

ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 379(2) ಪ್ರಕಾರ, ವಿವಾದ ಪರಿಹಾರ ಸಮಿತಿ (DRC) ಗೆ ನಿರ್ದಿಷ್ಟ ಆದೇಶದಲ್ಲಿ ಸೂಚಿಸಲಾದ ವ್ಯತ್ಯಾಸಗಳನ್ನು (variations) ತಿದ್ದುಪಡಿ ಮಾಡುವ ಅಧಿಕಾರ ನೀಡಲಾಗಿದೆ. ಜೊತೆಗೆ, ದಂಡ ವಿನಾಯಿತಿ (penalty waiver) ಅಥವಾ ಪ್ರಾಸಿಕ್ಯೂಷನ್ ವಿನಾಯಿತಿ (prosecution immunity) ನೀಡುವ ಅಧಿಕಾರವೂ ಇದೆ. ಇದರಿಂದ DRC ಗೆ ನಿರ್ದಿಷ್ಟ ಆದೇಶದಲ್ಲಿನ ತೆರಿಗೆ ವ್ಯತ್ಯಾಸಗಳನ್ನು ಬದಲಾಯಿಸುವ ಅಧಿಕಾರವಿದೆ ಎಂಬುದು ಸ್ಪಷ್ಟವಾಗುತ್ತದೆ.

18. 01.04.2026 ನಂತರದ ಸಂಕ್ರಮಣ ಅವಧಿಯಲ್ಲಿ (transition period) DRC ವಿಧಿಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆಯೇ?

ಇಲ್ಲ. 01.04.2026 ನಂತರದ ಸಂಕ್ರಮಣ ಅವಧಿಯ ಕಾರಣದಿಂದ ಮಾತ್ರ ವಿವಾದ ಪರಿಹಾರ ಸಮಿತಿ (DRC) ವಿಧಿಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುವುದಿಲ್ಲ. ಆದಾಯ ತೆರಿಗೆ ಕಾಯಿದೆ, 2025 ರ ಸಂರಕ್ಷಣಾ ಮತ್ತು ಸಂಕ್ರಮಣ ವಿಧಿಗಳ ಪ್ರಕಾರ, ಅದು ಜಾರಿಗೆ ಬರುವ ಮೊದಲು ಇರುವ ತೆರಿಗೆ ವರ್ಷಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಆದಾಯ ತೆರಿಗೆ ಕಾಯಿದೆ, 1961 ರಡಿಯಲ್ಲಿಯೇ ಮುಂದುವರಿಯುತ್ತವೆ. ಅದರಂತೆ, DRC ವ್ಯವಸ್ಥೆಯ ಲಭ್ಯತೆ ಮತ್ತು ಅನ್ವಯತೆ ಸಂಬಂಧಿತ ತೆರಿಗೆ ವರ್ಷಕ್ಕೆ ಯಾವ ಕಾಯಿದೆ ಅನ್ವಯವಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಂಕ್ರಮಣದ ಕಾರಣದಿಂದ 2025 ರ ಕಾಯಿದೆಯಡಿ ಹೊಸ ಅಥವಾ ವಿಸ್ತರಿತ ಹಕ್ಕುಗಳು ಸ್ವಯಂಚಾಲಿತವಾಗಿ ಸೃಷ್ಟಿಯಾಗುವುದಿಲ್ಲ.

19. ಆದಾಯ ತೆರಿಗೆ ಕಾಯಿದೆ, 1961 ಮತ್ತು ಆದಾಯ ತೆರಿಗೆ ಕಾಯಿದೆ, 2025 ರಲ್ಲಿ “ನಿರ್ದಿಷ್ಟ ಆದೇಶ” (specified order) ವನ್ನು ಕರಡು ಮೌಲ್ಯಮಾಪನ ಆದೇಶವನ್ನು ಒಳಗೊಂಡಂತೆ ವ್ಯಾಖ್ಯಾನಿಸಿದರೆ, ತೆರಿಗೆದಾರರು ವಿವಾದ ಪರಿಹಾರ ಮಂಡಳಿ (DRP) ಮತ್ತು ವಿವಾದ ಪರಿಹಾರ ಸಮಿತಿ (DRC) ನಡುವೆ ಆಯ್ಕೆ ಮಾಡಿಕೊಳ್ಳಬಹುದೇ?

ಹೌದು — ಸೈದ್ಧಾಂತಿಕವಾಗಿ ಎರಡೂ ವ್ಯವಸ್ಥೆಗಳು ಲಭ್ಯವಾಗಬಹುದು, ಏಕೆಂದರೆ 1961 ಕಾಯಿದೆಯ ಸೆಕ್ಷನ್ 144C (ಮತ್ತು 2025 ಕಾಯಿದೆಯ ಸೆಕ್ಷನ್ 275(1)) ಅಡಿಯಲ್ಲಿ ಇರುವ ಕರಡು ಮೌಲ್ಯಮಾಪನ ಆದೇಶವು ವಿವಾದ ಪರಿಹಾರ ಸಮಿತಿ (DRC) ಉದ್ದೇಶಕ್ಕಾಗಿ “ನಿರ್ದಿಷ್ಟ ಆದೇಶ” (specified order) ಎಂಬ ವ್ಯಾಖ್ಯಾನದೊಳಗೆ ಬರುತ್ತದೆ. ಆದರೆ, DRC ಲಭ್ಯತೆ ಕಾನೂನಿನಲ್ಲಿ ನಿಗದಿಪಡಿಸಿರುವ ಅರ್ಹತಾ ಷರತ್ತುಗಳಿಗೆ ಒಳಪಟ್ಟಿರುತ್ತದೆ (ಉದಾಹರಣೆಗೆ ಹಣಕಾಸು ಮಿತಿಗಳು, ವ್ಯತ್ಯಾಸದ ಸ್ವರೂಪ, ಗಂಭೀರ ಅಪರಾಧಗಳಿಲ್ಲದಿರುವುದು ಇತ್ಯಾದಿ). ಹೀಗಾಗಿ, ವ್ಯಾಖ್ಯಾನದ ಮಟ್ಟದಲ್ಲಿ ಕೆಲವು ಸಂದರ್ಭಗಳಲ್ಲಿ ಎರಡೂ ವ್ಯವಸ್ಥೆಗಳು ಅನ್ವಯಿಸುವಂತಾದರೂ, ಅವು ಪರ್ಯಾಯ ಪರಿಹಾರಗಳು (alternative remedies) ಆಗಿವೆ, ಸಮಕಾಲೀನವಾಗಿ (concurrently) ಬಳಸಲಾಗುವುದಿಲ್ಲ. ಆದ್ದರಿಂದ ತೆರಿಗೆದಾರರು ಎರಡನ್ನೂ ಒಂದೇ ಸಮಯದಲ್ಲಿ ಅನುಸರಿಸಲು ಸಾಧ್ಯವಿಲ್ಲ.

20. ಆದಾಯ ತೆರಿಗೆ ಕಾಯಿದೆ, 2025 ರಲ್ಲಿ, ಆದಾಯ ತೆರಿಗೆ ಕಾಯಿದೆ, 1961 ರ ಅಧ್ಯಾಯ XIX-B ಗೆ ಹೋಲಿಸಿದರೆ, ಪೂರ್ವ ನಿರ್ಣಯ (Advance Ruling) ವ್ಯವಸ್ಥೆಯಲ್ಲಿ ಯಾವುದೇ ಮೂಲಭೂತ ಅಥವಾ ಪ್ರಕ್ರಿಯಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆಯೇ?

ಯಾವುದೇ ಮೂಲಭೂತ ಅಥವಾ ಪ್ರಕ್ರಿಯಾತ್ಮಕ ಬದಲಾವಣೆಗಳನ್ನು ಆದಾಯ ತೆರಿಗೆ ಕಾಯಿದೆ, 2025 ರಲ್ಲಿನ ಪೂರ್ವ ನಿರ್ಣಯ (Advance Ruling) ವ್ಯವಸ್ಥೆಯಲ್ಲಿ ಪರಿಚಯಿಸಲಾಗಿಲ್ಲ. ಆದಾಯ ತೆರಿಗೆ ಕಾಯಿದೆ ಮೂಲತಃ ಹಿಂದಿನ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್‌ಗಳು 245N ರಿಂದ 245W (ಹಣಕಾಸು ಕಾಯಿದೆ, 2021 ನಂತರ ತಿದ್ದುಪಡಿ ಮಾಡಿದಂತೆ) ಒಳಗೊಂಡಿದ್ದ ವಿಧಿಗಳನ್ನು ಒಂದೇ ಚೌಕಟ್ಟಿನಲ್ಲಿ ಒಗ್ಗೂಡಿಸಿ, ಮರುಸಂಖ್ಯೀಕರಣ (renumbering) ಮಾಡಿ ಹಾಗೂ ಸರಳಗೊಳಿಸುತ್ತದೆ.

21. 01.04.2026 ರಂದು ಆದಾಯ ತೆರಿಗೆ ಕಾಯಿದೆ, 1961 ಅಡಿಯಲ್ಲಿ ಪೂರ್ವ ನಿರ್ಣಯ ಅರ್ಜಿ ಬಾಕಿ ಇದ್ದರೆ, ಅದನ್ನು ಹೇಗೆ ನಿರ್ವಹಿಸಲಾಗುತ್ತದೆ?

ಸೆಕ್ಷನ್ 536(2)(e) ಮತ್ತು (j) ಪ್ರಕಾರ, ರದ್ದುಪಡಿಸುವಿಕೆಯಿಂದ (repeal) ಬಾಕಿ ಇರುವ ಪ್ರಕ್ರಿಯೆಗಳು ವಿಶೇಷವಾಗಿ ಬದಲಾಯಿಸದಿದ್ದರೆ ಅವು ಮುಂದುವರಿಯುತ್ತವೆ. ಆದ್ದರಿಂದ, 01.04.2026 ರಂದು ಬಾಕಿ ಇರುವ ಪೂರ್ವ ನಿರ್ಣಯ (advance ruling) ಅರ್ಜಿಯನ್ನು ಆ ಸಮಯದಲ್ಲಿ ಜಾರಿಯಲ್ಲಿದ್ದ ಕಾನೂನಿನಡಿ ರಚಿಸಲಾದ ಸಕ್ಷಮ ಪ್ರಾಧಿಕಾರದ ಮುಂದೆ ಮುಂದುವರಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆ, 2025 ಬಾಕಿ ಇರುವ ಪೂರ್ವ ನಿರ್ಣಯ ಪ್ರಕ್ರಿಯೆಗಳಿಗೆ ಯಾವುದೇ ಅಡಚಣೆ ಉಂಟುಮಾಡುವುದಿಲ್ಲ.

22. ರದ್ದುಪಡಿಸುವ ಮೊದಲು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 263 ಅಡಿಯಲ್ಲಿ ಯಾವುದೇ ಪರಿಷ್ಕರಣೆ ಆರಂಭಿಸಲಾಗಿಲ್ಲವಾದರೆ, 01.04.2026 ನಂತರ 2026 ಕ್ಕಿಂತ ಹಿಂದಿನ ತೆರಿಗೆ ವರ್ಷಕ್ಕೆ ಸಂಬಂಧಿಸಿ ಹೊಸ ಪರಿಷ್ಕರಣೆ ಆರಂಭಿಸಬಹುದೇ?

ಹೌದು, ಆದರೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 263(2) ಅಡಿಯಲ್ಲಿ ನಿಗದಿಪಡಿಸಿರುವ ಮಿತಿಯ ಅವಧಿ ಮುಗಿದಿರಬಾರದು. ಸೆಕ್ಷನ್ 536(2)(c) ಪ್ರಕಾರ, 01.04.2026 ನಂತರವೂ ಹಿಂದಿನ ತೆರಿಗೆ ವರ್ಷಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸಬಹುದು, ಆದರೆ ಅವುಗಳನ್ನು ಸಂಪೂರ್ಣವಾಗಿ ಆದಾಯ ತೆರಿಗೆ ಕಾಯಿದೆ, 1961 ರ ವಿಧಾನಗಳ ಅಡಿಯಲ್ಲಿ ಮಾತ್ರ ನಡೆಸಬೇಕು. ಆದರೆ ಮಿತಿಯ ಅವಧಿ ಈಗಾಗಲೇ ಮುಗಿದಿದ್ದರೆ, ಅದನ್ನು ಆದಾಯ ತೆರಿಗೆ ಕಾಯಿದೆ, 2025 ಅಡಿಯಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ.

23. ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ, ಒಂದು ಆದೇಶವನ್ನು ಪರಿಷ್ಕರಿಸಲು (revision) ಅದು “ತಪ್ಪಾಗಿದೆ” (erroneous) ಮತ್ತು ರಾಜಸ್ವದ ಹಿತಾಸಕ್ತಿಗೆ ಹಾನಿಕಾರಕವಾಗಿದೆ” (prejudicial to the interests of revenue) ಎಂಬ ಎರಡೂ ಷರತ್ತುಗಳನ್ನು ಪೂರೈಸಬೇಕು ಎಂಬ ಅಗತ್ಯ ಮುಂದುವರಿಯುತ್ತದೆಯೇ?

ಮೌಲ್ಯಮಾಪನಾಧಿಕಾರಿಯ ಆದೇಶವು “ತಪ್ಪಾಗಿದೆ” (erroneous) ಮತ್ತು “ರಾಜಸ್ವದ ಹಿತಾಸಕ್ತಿಗೆ ಹಾನಿಕಾರಕವಾಗಿದೆ” (prejudicial to the interests of revenue) ಎಂಬ ಎರಡೂ ಮೂಲಭೂತ ನ್ಯಾಯಾಧಿಕಾರ ಷರತ್ತುಗಳು ಮುಂದುವರಿಯುತ್ತವೆ. ಇದು ಹಿಂದಿನ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 263 ರಲ್ಲಿದ್ದಂತೆಯೇ, ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 377 ಅಡಿಯಲ್ಲಿ ಕೂಡ ಅನ್ವಯಿಸುತ್ತದೆ.

24. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 263 ಮತ್ತು ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 377 ಅಡಿಯಲ್ಲಿ ಪರಿಷ್ಕರಣೆಯ (revision) ಮಿತಿಯ ಅವಧಿಯಲ್ಲಿ ಯಾವುದೇ ಬದಲಾವಣೆ ಆಗಿದೆಯೇ?

ಮೂಲಭೂತ ಬದಲಾವಣೆಗಳನ್ನು ಹೊರಗಿನ ಮಿತಿಯ ಅವಧಿಯಲ್ಲಿ (outer limitation period) ಮಾಡಲಾಗಿಲ್ಲ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 263 ಮತ್ತು ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 377(4) ಎರಡರಲ್ಲಿಯೂ, ಪರಿಷ್ಕರಣೆ (revision) ಅನ್ನು ಪರಿಷ್ಕರಿಸಬೇಕಾದ ಆದೇಶ ನೀಡಿದ ಹಣಕಾಸು ವರ್ಷದ ಅಂತ್ಯದಿಂದ ಎರಡು ವರ್ಷಗಳ ಒಳಗೆ ಮಾಡಬೇಕು.

ಆದರೆ, ಆದಾಯ ತೆರಿಗೆ ಕಾಯಿದೆ, 2025 ಈ ಲೆಕ್ಕಾಚಾರ ವಿಧಾನವನ್ನು ಸ್ಪಷ್ಟಪಡಿಸುತ್ತದೆ. 1961 ರ ಕಾಯಿದೆಯಲ್ಲಿ (ಸೆಕ್ಷನ್ 129 ಅಡಿಯಲ್ಲಿ) ಪ್ರಕ್ರಿಯೆ ಸ್ಥಗಿತ (stay) ಅಥವಾ ಮರುಶ್ರವಣ (rehearing) ಸಮಯವನ್ನು ಹೊರಗಿಡುವ ನಿಯಮ ಇತ್ತು. 2025 ರ ಕಾಯಿದೆಯ ಸೆಕ್ಷನ್ 377(6) ಇದನ್ನು ಇನ್ನಷ್ಟು ಸ್ಪಷ್ಟವಾಗಿ ವಿವರಿಸಿ, ಹೊರಗಿಡಬೇಕಾದ ಅವಧಿಗಳನ್ನು ಸ್ಪಷ್ಟವಾಗಿ ಪಟ್ಟಿ ಮಾಡುತ್ತದೆ—ಉದಾಹರಣೆಗೆ ಮರುಶ್ರವಣಕ್ಕೆ ತೆಗೆದುಕೊಳ್ಳುವ ಸಮಯ ಮತ್ತು ನ್ಯಾಯಾಲಯದಿಂದ ಸ್ಥಗಿತಗೊಂಡ ಇರುವ ಅವಧಿ. ಇನ್ನೂ ಮುಖ್ಯವಾಗಿ, ಸೆಕ್ಷನ್ 377(7) ಪ್ರಕಾರ ಸ್ಪಷ್ಟವಾದ 60 ದಿನಗಳ ಕನಿಷ್ಠ ಉಳಿಕೆ ಅವಧಿ ನಿಯಮವನ್ನು ಪರಿಚಯಿಸಲಾಗಿದೆ. ಅಂದರೆ, ಸಂಬಂಧಿತ ಅವಧಿಗಳನ್ನು ಹೊರಗಿಟ್ಟ ನಂತರ ಉಳಿದಿರುವ ಸಮಯ 60 ದಿನಗಳಿಗಿಂತ ಕಡಿಮೆ ಇದ್ದರೆ, ಅದು ಸ್ವಯಂಚಾಲಿತವಾಗಿ 60 ದಿನಗಳವರೆಗೆ ವಿಸ್ತರಿಸಲಾಗುತ್ತದೆ.

25. 01.04.2026 ರಂದು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 264 ಅಡಿಯಲ್ಲಿ ಒಂದು ಅರ್ಜಿ ಬಾಕಿ ಇದ್ದರೆ, ಅದನ್ನು ಯಾವ ಕಾಯಿದೆ (ಆದಾಯ ತೆರಿಗೆ ಕಾಯಿದೆ, 1961 ಅಥವಾ ಆದಾಯ ತೆರಿಗೆ ಕಾಯಿದೆ, 2025) ಅಡಿಯಲ್ಲಿ ನಿರ್ಧರಿಸಲಾಗುತ್ತದೆ?

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 264 ಅಡಿಯಲ್ಲಿ ಸಲ್ಲಿಸಲಾದ ಮತ್ತು 01.04.2026 ರಂದು ಬಾಕಿ ಇರುವ ಪರಿಷ್ಕರಣೆ ಅರ್ಜಿಯನ್ನು ಆದಾಯ ತೆರಿಗೆ ಕಾಯಿದೆ, 1961 ರ ವಿಧಿಗಳ ಪ್ರಕಾರವೇ ನಿರ್ಧರಿಸಲಾಗುತ್ತದೆ. ಹೊಸ ಕಾಯಿದೆ ಜಾರಿಗೆ ಬಂದ ದಿನಾಂಕದಂದು ಬಾಕಿ ಇರುವ ಯಾವುದೇ ಪ್ರಕ್ರಿಯೆಗಳು—ಪರಿಷ್ಕರಣೆ ಪ್ರಕ್ರಿಯೆಗಳನ್ನೂ ಒಳಗೊಂಡು—ಹೊಸ ಕಾಯಿದೆ ಜಾರಿಗೆ ಬಂದಿಲ್ಲವೆಂದು ಪರಿಗಣಿಸಿ ಮುಂದುವರಿಸಬೇಕು ಮತ್ತು ನಿರ್ಧರಿಸಬೇಕು ಎಂದು ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 536(2)(c) ಮತ್ತು (e) ಸ್ಪಷ್ಟವಾಗಿ ಹೇಳುತ್ತದ. ಸೆಕ್ಷನ್ 264 ಅಡಿಯಲ್ಲಿ ಪರಿಷ್ಕರಣೆ ಒಂದು ರದ್ದುಪಡಿಸಲಾದ ಕಾಯಿದೆಯಡಿ ಆರಂಭವಾದ ಕಾನೂನು ಪ್ರಕ್ರಿಯೆಯಾಗಿರುವುದರಿಂದ, ಅದರ ಹಕ್ಕುಗಳು, ವ್ಯಾಪ್ತಿ, ಮಿತಿಯ ಅವಧಿ ಮತ್ತು ಅಧಿಕಾರಗಳು ಅದೇ ಕಾಯಿದೆಯಡಿಯಲ್ಲಿಯೇ ನಿಯಂತ್ರಿಸಲ್ಪಡುತ್ತವೆ.