1. ಆದಾಯ ತೆರಿಗೆ ಕಾಯ್ದೆ, 1961 ಅನ್ನು ಆದಾಯ ತೆರಿಗೆ ಕಾಯ್ದೆ, 2025 ರಿಂದ ಬದಲಿಸುವ ಪ್ರಾಥಮಿಕ ಉದ್ದೇಶವೇನು?

ಕಡಿಮೆ ಅನುಸರಣೆ ಹೊರೆ, ಏಕೀಕೃತ ನಿಬಂಧನೆಗಳು ಮತ್ತು ಸ್ಪಷ್ಟ ವ್ಯಾಖ್ಯಾನಗಳೊಂದಿಗೆ ಸುವ್ಯವಸ್ಥಿತ, ಸರಳೀಕೃತ ಮತ್ತು ಆಧುನಿಕ ತೆರಿಗೆ ಸಂಹಿತೆಯನ್ನು ಒದಗಿಸಲು ಆದಾಯ ತೆರಿಗೆ ಕಾಯ್ದೆ, 2025 ಅನ್ನು ಜಾರಿಗೆ ತರಲಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲದಲ್ಲಿ ಆದಾಯ ತೆರಿಗೆ ಕಾಯ್ದೆ, 1961ಕ್ಕೆ ಅನೇಕ ತಿದ್ದುಪಡಿಗಳು, ವಿಧಿಗಳು ಮತ್ತು ವಿವರಣೆಗಳು ಸೇರಿಸಲ್ಪಟ್ಟಿದ್ದರಿಂದ, ಅದು ಸಂಕೀರ್ಣವಾಗಿದ್ದು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿತ್ತು. ಹೊಸ ಕಾಯ್ದೆಯು ಅದೇ ತೆರಿಗೆ ನೀತಿಯನ್ನು ಹೆಚ್ಚು ತಾರ್ಕಿಕ, ಸುಲಭವಾಗಿ ಅರ್ಥವಾಗುವ ಮತ್ತು ಓದುಗರಿಗೆ ಅನುಕೂಲಕರವಾದ ರೂಪದಲ್ಲಿ ಪ್ರಸ್ತುತಪಡಿಸುವ ಉದ್ದೇಶ ಹೊಂದಿದೆ. ಈ ಕಾಯ್ದೆಯು ತೆರಿಗೆದಾರ-ಕೇಂದ್ರಿತ ವಿಧಾನವನ್ನು ಮತ್ತಷ್ಟು ಬಲಪಡಿಸುವ ಮೂಲಕ ಅನುಸರಣೆಯನ್ನು ಸರಳಗೊಳಿಸುತ್ತದೆ, ವ್ಯವಹಾರ ನಡೆಸುವ ಸುಲಭತೆಯನ್ನು ಉತ್ತೇಜಿಸುತ್ತದೆ ಹಾಗೂ ಭಾರತದ ತೆರಿಗೆ ವ್ಯವಸ್ಥೆಯನ್ನು ಸಮಕಾಲೀನ ಜಾಗತಿಕ ಮಾನದಂಡಗಳಿಗೆ ಹೊಂದಾಣಿಕೆ ಮಾಡುತ್ತದೆ.

2. ಆದಾಯ ತೆರಿಗೆ ಕಾಯ್ದೆ, 2025 ಆದಾಯ ತೆರಿಗೆ ಕಾಯ್ದೆ, 1961 ಅನ್ನು ಸಂಪೂರ್ಣವಾಗಿ ಬದಲಿಸುತ್ತದೆಯೇ?

ಹೌದು. ಆದಾಯ ತೆರಿಗೆ ಕಾಯ್ದೆ, 1961 ಅನ್ನು 01.04.2026 ರಿಂದ ರದ್ದುಗೊಳಿಸಲಾಗಿದೆ. ಆದಾಗ್ಯೂ, ಬಾಕಿ ಇರುವ ವಿಷಯಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಹಾಗೂ ಹೊಸ ಕಾಯ್ದೆಗೆ ಸುಗಮವಾಗಿ ಪರಿವರ್ತನೆ ಆಗುವಂತೆ, ಕೆಲವು ಪರಿವರ್ತನಾ ವಿಧಿಗಳು ಹಳೆಯ ಕಾಯ್ದೆಯ ಅಡಿಯಲ್ಲಿ ಕೆಲವು ಪ್ರಕ್ರಿಯೆಗಳನ್ನು ಮುಂದುವರಿಸಲು ಅವಕಾಶ ನೀಡುತ್ತವೆ.

3. ಆದಾಯ ತೆರಿಗೆ ಕಾಯ್ದೆ, 2025 ಹೊಸ ತೆರಿಗೆಗಳನ್ನು ಪರಿಚಯಿಸುತ್ತಿದೆಯೇ ಅಥವಾ ತೆರಿಗೆ ಭಾರವನ್ನು ಹೆಚ್ಚಿಸುತ್ತಿದೆಯೇ?

ಇಲ್ಲ. ಆದಾಯ ತೆರಿಗೆ ಕಾಯ್ದೆ, 2025 ಯಾವುದೇ ಹೊಸ ತೆರಿಗೆಯನ್ನು ವಿಧಿಸುವುದಿಲ್ಲ. ಹಳೆಯ ಕಾಯ್ದೆಯನ್ನು ಹೊಸ ಕಾಯ್ದೆಯಿಂದ ಬದಲಿಸುವ ಉದ್ದೇಶವು ಈ ಕೆಳಗಿನಂತಿದೆ:

• ಶಾಸನಬದ್ಧ ಭಾಷೆಯನ್ನು ಸರಳಗೊಳಿಸುವುದು

• ಕಾಯ್ದೆಯ ರಚನೆಯನ್ನು ಸ್ಪಷ್ಟಗೊಳಿಸುವುದು

• ವ್ಯಾಖ್ಯಾನದ ಕುರಿತ ವಿವಾದಗಳನ್ನು ಕಡಿಮೆ ಮಾಡುವುದು

• ಕರಡು ರಚನೆಯ ಶೈಲಿಯನ್ನು ಆಧುನಿಕ ಶಾಸನಾತ್ಮಕ ಮಾನದಂಡಗಳಿಗೆ ಹೊಂದಾಣಿಕೆ ಮಾಡುವುದು

• ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವುದು

ಈ ಸುಧಾರಣೆಯ ಉದ್ದೇಶವು ತೆರಿಗೆ ಕಾಯ್ದೆಯನ್ನು ಹೆಚ್ಚು ಊಹಿಸಬಹುದಾದ, ಪಾರದರ್ಶಕ ಮತ್ತು ಅನುಸರಿಸಲು ಸುಲಭವಾಗುವಂತೆ ಮಾಡುವುದು. ತೆರಿಗೆದಾರರ ಮೇಲಿನ ಹಣಕಾಸಿನ ಅಥವಾ ಅನುಸರಣೆ ಸಂಬಂಧಿತ ಭಾರವನ್ನು ಹೆಚ್ಚಿಸುವುದು ಇದರ ಉದ್ದೇಶವಲ್ಲ.

4. ಚಿಕ್ಕ ತೆರಿಗೆದಾರನಾಗಿ, ಈ ಬದಲಾವಣೆಯಿಂದ ನನಗೆ ಹೇಗೆ ಉಪಯೋಗವಾಗುತ್ತದೆ?

ಕಾಯ್ದೆಯನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಮಾಡುವುದು ಈ ಬದಲಾವಣೆಯ ಪ್ರಮುಖ ಉದ್ದೇಶಗಳಲ್ಲಿ ಒಂದು. 1961ರ ಕಾಯ್ದೆಯಲ್ಲಿ ಕರಡು ರಚನೆಯು ಸಂಕೀರ್ಣವಾಗಿದ್ದ ಕಾರಣ, ಅದರ ಅನುಸರಣೆಗೆ ತಜ್ಞರ ವ್ಯಾಖ್ಯಾನ ಅಗತ್ಯವಾಗುತ್ತಿತ್ತು. 2025ರ ಕಾಯ್ದೆಯ ಉದ್ದೇಶವು ಈ ಕೆಳಗಿನಂತಿದೆ:

• ಸರಳವಾದ ಭಾಷೆಯನ್ನು ಬಳಸುವುದು

• ಅತಿಯಾದ ಅಡ್ಡ ಉಲ್ಲೇಖಗಳನ್ನು ಕಡಿಮೆ ಮಾಡುವುದು

• ವಿವಿಧ ಕಡೆಗಳಲ್ಲಿ ಚದುರಿದ್ದ ನಿಬಂಧನೆಗಳನ್ನು ಕ್ರೋಢೀಕರಿಸುವುದು

• ಡಿಜಿಟಲ್ ಏಕೀಕರಣವನ್ನು ಸುಧಾರಿಸುವುದು

ದೀರ್ಘಾವಧಿಯ ಉದ್ದೇಶವು ಅನುಸರಣೆಯಲ್ಲಿನ ಸಂಕೀರ್ಣತೆಗಳನ್ನು ಕಡಿಮೆ ಮಾಡುವುದು ಹಾಗೂ ಸಂಕೀರ್ಣವಾದ ವ್ಯಾಖ್ಯಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಾಗಿದೆ.

5. ಹೊಸ ಕಾಯ್ದೆಯಲ್ಲಿ ಕಾಯ್ದೆಯ ಗಾತ್ರ ಮತ್ತು ಸಂಕೀರ್ಣತೆ ಹೇಗೆ ಬದಲಾಗಿದೆ?

ಆದಾಯ ತೆರಿಗೆ ಕಾಯ್ದೆ, 2025ರಲ್ಲಿ 536 ವಿಭಾಗಗಳು ಮತ್ತು 16 ಅನುಸೂಚಿಗಳು ಇವೆ. ಇದಕ್ಕೆ ಹೋಲಿಸಿದರೆ, ಆದಾಯ ತೆರಿಗೆ ಕಾಯ್ದೆ, 1961ರಲ್ಲಿ 819 ವಿಭಾಗಗಳು ಮತ್ತು 14 ಅನುಸೂಚಿಗಳು ಇದ್ದವು. ಹೊಸ ಕಾಯಿದೆಯಲ್ಲಿ, ಒಟ್ಟಾರೆ ಸಂಕೀರ್ಣತೆಯನ್ನು ಕಡಿಮೆ ಮಾಡಲಾಗಿದೆ ಹೇಗೆಂದರೆ:

(i) ವಿವರಣೆಗಳು ಮತ್ತು ನಿಬಂಧನೆಗಳನ್ನು ವಿಭಾಗಗಳ ಮುಖ್ಯ ಪಠ್ಯದಲ್ಲಿಯೇ ಸೇರಿಸಲಾಗಿದೆ;

(ii) ದೀರ್ಘವಾದ ವಿವರಣಾತ್ಮಕ ನಿಬಂಧನೆಗಳ ಬದಲಿಗೆ ಕೋಷ್ಟಕಗಳು ಮತ್ತು ಸೂತ್ರಗಳನ್ನು ಬಳಸಲಾಗಿದೆ;

(iii) ಅನಗತ್ಯ ಹಾಗೂ ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ತೆಗೆದುಹಾಕಲಾಗಿದೆ; ಮತ್ತು

(iv) ಅಡ್ಡ ಉಲ್ಲೇಖಗಳನ್ನು ಹೆಚ್ಚು ಸ್ಪಷ್ಟ ಮತ್ತು ನೇರವಾಗಿಸಲಾಗಿದೆ. ಅದೇ ರೀತಿ, ಆದಾಯ ತೆರಿಗೆ ನಿಯಮಗಳನ್ನು 511 ನಿಯಮಗಳು ಮತ್ತು 399 ಫಾರ್ಮ್‌ಗಳಿಂದ 333 ನಿಯಮಗಳು ಮತ್ತು 190 ಫಾರ್ಮ್‌ಗಳಿಗೆ ಇಳಿಸಲಾಗಿದೆ.

6. ಆದಾಯ ತೆರಿಗೆ ಕಾಯ್ದೆ, 2025ರಲ್ಲಿ ಅಧ್ಯಾಯಗಳ ರಚನೆಯನ್ನು ಮರುಸಂಘಟಿಸಲಾಗಿದೆಯೇ?

ಹೌದು. ಆದಾಯ ತೆರಿಗೆ ಕಾಯ್ದೆ, 2025ರಲ್ಲಿ ಅಧ್ಯಾಯಗಳ ರಚನೆಯನ್ನು ಆದಾಯ ತೆರಿಗೆ ಕಾಯ್ದೆ, 1961ಕ್ಕೆ ಹೋಲಿಸಿದರೆ ಹೆಚ್ಚು ತಾರ್ಕಿಕ ಕ್ರಮದಲ್ಲಿ ಮರುಸಂಘಟಿಸಲಾಗಿದೆ. ಇದರಲ್ಲಿ ನಿಬಂಧನೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ಮರುಗುಂಪುಗೊಳಿಸಲಾಗಿದೆ, ಭಾಷೆಯನ್ನು ಸರಳಗೊಳಿಸಲಾಗಿದೆ ಹಾಗೂ ವಿಧಿಗಳು ಮತ್ತು ವಿವರಣೆಗಳನ್ನು ಮುಖ್ಯ ಪಠ್ಯದಲ್ಲಿಯೇ ಸೇರಿಸಲಾಗಿದೆ. ಹಲವು ದಶಕಗಳ ತಿದ್ದುಪಡಿಗಳ ಪರಿಣಾಮವಾಗಿ ಆದಾಯ ತೆರಿಗೆ ಕಾಯ್ದೆ, 1961ರ ರಚನೆಯು ವಿಭಜಿತ ಸ್ವರೂಪದಲ್ಲಿತ್ತು. ಆದರೆ ಆದಾಯ ತೆರಿಗೆ ಕಾಯ್ದೆ, 2025 ಹೆಚ್ಚು ಸ್ವಚ್ಛ, ವ್ಯವಸ್ಥಿತ ಮತ್ತು ಸುಸಂಗತವಾದ ರಚನೆಯನ್ನು ಹೊಂದಿದೆ.

7. ಆದಾಯ ತೆರಿಗೆ ಕಾಯ್ದೆ, 1961 ಅನ್ನು ರದ್ದುಗೊಳಿಸಿ 01.04.2026ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದಿರುವುದರಿಂದ, ಹಳೆಯ ಕಾಯ್ದೆಯ ಅಡಿಯಲ್ಲಿ ಮಾಡಲಾದ ಎಲ್ಲಾ ಕ್ರಮಗಳು ಅಮಾನ್ಯವಾಗುತ್ತವೆಯೇ?

ಇಲ್ಲ. ಆದಾಯ ತೆರಿಗೆ ಕಾಯ್ದೆ, 1961 ಅನ್ನು ರದ್ದುಗೊಳಿಸಿದರೂ, 01 ಏಪ್ರಿಲ್ 2026ರ ಮೊದಲು ಇರುವ ತೆರಿಗೆ ವರ್ಷಗಳಿಗೆ ಸಂಬಂಧಿಸಿದ ಯಾವುದೇ ಕ್ರಮದ ಮೇಲೆ ಅದರ ಪರಿಣಾಮ ಬೀರುವುದಿಲ್ಲ. ಉದಾಹರಣೆಗೆ, ತೆರಿಗೆದಾರರ 2023–24 ಮೌಲ್ಯಮಾಪನ ವರ್ಷದ ಮೌಲ್ಯಮಾಪನೆಯು ಹಳೆಯ ಕಾಯ್ದೆಯ ಅಡಿಯಲ್ಲಿ ಪೂರ್ಣಗೊಂಡಿದ್ದರೆ, ಹೊಸ ಕಾಯ್ದೆ ಜಾರಿಗೆ ಬಂದ ನಂತರವೂ ಆ ಮೌಲ್ಯಮಾಪನೆಯು ಮಾನ್ಯವಾಗಿಯೇ ಇರುತ್ತದೆ. ಅದೇ ರೀತಿ, ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಯಾವುದೇ ಬಾಕಿ ಪ್ರಕ್ರಿಯೆಗಳು ಸಂಬಂಧಿತ ಪರಿವರ್ತನಾ ವಿಧಿಗಳ ಪ್ರಕಾರ ಮುಂದುವರಿಯುತ್ತವೆ.

8. ಆದಾಯ ತೆರಿಗೆ ಕಾಯ್ದೆ, 2025ರಲ್ಲಿ 'ಆದಾಯ ತೆರಿಗೆ ವಿಧಿಸುವ ಆಧಾರ'ಕ್ಕೆ ಸಂಬಂಧಿಸಿದಂತೆ ಯಾವುದಾದರೂ ಬದಲಾವಣೆ ಇದೆಯೇ?

ಹೊಸ ಆದಾಯ ತೆರಿಗೆ ಕಾಯ್ದೆ, 2025ರಲ್ಲಿ ಆದಾಯ ತೆರಿಗೆ ವಿಧಿಸುವ ವಿಭಾಗವನ್ನು ಸರಳಗೊಳಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರ, ಒಬ್ಬ ವ್ಯಕ್ತಿಯ 'ಹಿಂದಿನ ವರ್ಷದ' 'ಒಟ್ಟು ಆದಾಯ'ದ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತಿತ್ತು. ಜೊತೆಗೆ, ಯಾವುದೇ 'ಮೌಲ್ಯಮಾಪನ ವರ್ಷದ' ತೆರಿಗೆ ದರ ಅಥವಾ ದರಗಳನ್ನು ಸಂಬಂಧಿತ ಕೇಂದ್ರ ಕಾಯ್ದೆಯು ನಿಗದಿಪಡಿಸಿದಂತೆ ಹಾಗೂ ಆದಾಯ ತೆರಿಗೆ ಕಾಯ್ದೆ, 1961ರ ವಿಧಿಗಳಿಗೆ ಅನುಗುಣವಾಗಿ ಮತ್ತು ಅವುಗಳಿಗೆ ಒಳಪಟ್ಟು ಆದಾಯ ತೆರಿಗೆ ವಿಧಿಸಲಾಗುತ್ತಿತ್ತು. ಇದಕ್ಕೆ ವಿರುದ್ಧವಾಗಿ, ಆದಾಯ ತೆರಿಗೆ ಕಾಯ್ದೆ, 2025ರಲ್ಲಿ 'ಹಿಂದಿನ ವರ್ಷ' ಎಂಬ ಪದದ ಬದಲಿಗೆ 'ತೆರಿಗೆ ವರ್ಷ' ಎಂಬ ಪದವನ್ನು ಬಳಸಲಾಗಿದೆ. ಹಾಗೆಯೇ, 'ಮೌಲ್ಯಮಾಪನ ವರ್ಷ' ಎಂಬ ಪದದ ಬಳಕೆಯನ್ನು ನಿಲ್ಲಿಸಲಾಗಿದೆ. ಈಗ, ಒಬ್ಬ ವ್ಯಕ್ತಿಯ 'ತೆರಿಗೆ ವರ್ಷದ' 'ಒಟ್ಟು ಆದಾಯ'ದ ಮೇಲೆ, ಆ ತೆರಿಗೆ ವರ್ಷಕ್ಕೆ ಸಂಬಂಧಿತ ಯಾವುದೇ ಕೇಂದ್ರ ಕಾಯ್ದೆಯಲ್ಲಿ ನಿಗದಿಪಡಿಸಲಾದ ತೆರಿಗೆ ದರ ಅಥವಾ ದರಗಳ ಪ್ರಕಾರ ಹಾಗೂ ಆದಾಯ ತೆರಿಗೆ ಕಾಯ್ದೆ, 2025ರ ವಿಧಿಗಳಿಗೆ ಅನುಗುಣವಾಗಿ ಮತ್ತು ಅವುಗಳಿಗೆ ಒಳಪಟ್ಟು ಆದಾಯ ತೆರಿಗೆ ವಿಧಿಸಲಾಗುತ್ತದೆ.

9. "ತೆರಿಗೆ ವರ್ಷ" ಎಂಬ ಪರಿಕಲ್ಪನೆ ಎಂದರೇನು? "ಮೌಲ್ಯಮಾಪನ ವರ್ಷ" ಎಂಬ ಪರಿಕಲ್ಪನೆಯನ್ನು ತೆಗೆದುಹಾಕಿರುವ ಹಿನ್ನೆಲೆಯಲ್ಲಿ ಆದಾಯವನ್ನು ಮೌಲ್ಯಮಾಪನೆಯು ಹೇಗೆ ಮಾಡಲಾಗುತ್ತದೆ?

'ತೆರಿಗೆ ವರ್ಷ' ಎಂದರೆ ಒಂದು ಹಣಕಾಸು ವರ್ಷದೊಳಗಿನ ಹನ್ನೆರಡು ತಿಂಗಳ ಅವಧಿ. ಇದು ಆದಾಯ ತೆರಿಗೆ ಕಾಯ್ದೆ, 1961ರಲ್ಲಿ ಬಳಸಲಾಗುತ್ತಿದ್ದ 'ಹಿಂದಿನ ವರ್ಷ' ಎಂಬ ಪದಕ್ಕೆ ಬದಲಿಯಾಗಿದೆ. 'ತೆರಿಗೆ ವರ್ಷ' ಎಂಬ ಪರಿಕಲ್ಪನೆಯು 01 ಏಪ್ರಿಲ್ 2026ರಿಂದ ಅನ್ವಯವಾಗುತ್ತದೆ. ಅಂದರೆ, 2026–27ರ ಹಣಕಾಸು ವರ್ಷದಿಂದ ಗಳಿಸಲಾದ ಆದಾಯಕ್ಕೆ ಇದು ಅನ್ವಯವಾಗುತ್ತದೆ ಮತ್ತು ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಇದನ್ನು 'ತೆರಿಗೆ ವರ್ಷ 2026–27' ಎಂದು ಉಲ್ಲೇಖಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಹೊಸ ಕಾಯ್ದೆಯಲ್ಲಿನ 'ತೆರಿಗೆ ವರ್ಷ' ಎಂಬ ಪರಿಕಲ್ಪನೆಯು ಆದಾಯ ತೆರಿಗೆ ಕಾಯ್ದೆ, 1961ರಲ್ಲಿನ 'ಹಿಂದಿನ ವರ್ಷ' ಎಂಬ ಪರಿಕಲ್ಪನೆಗೆ ಸಮನಾಗಿದೆ. ಅದರಂತೆ, ಒಂದು ತೆರಿಗೆ ವರ್ಷದ ಆದಾಯವನ್ನು ಆ ತೆರಿಗೆ ವರ್ಷ ಮುಗಿದ ನಂತರವೇ ನಿರ್ಧರಣೆ ಮಾಡಲಾಗುತ್ತದೆ. ಇದು ಆದಾಯ ತೆರಿಗೆ ಕಾಯ್ದೆ, 1961ರ ಪ್ರಸ್ತುತ ವ್ಯವಸ್ಥೆಯಂತೆಯೇ ಆಗಿದ್ದು, ಅಲ್ಲಿ ಹಿಂದಿನ ವರ್ಷದ ಆದಾಯವನ್ನು ಆ ಹಿಂದಿನ ವರ್ಷ ಮುಗಿದ ನಂತರ ನಿರ್ಧರಣೆ ಮಾಡಲಾಗುತ್ತಿತ್ತು. 'ಹಿಂದಿನ ವರ್ಷ' ಮತ್ತು 'ನಿರ್ಧರಣೆ ವರ್ಷ' ಎಂಬ ಪದಗಳು ಎರಡು ವಿಭಿನ್ನ ಹಣಕಾಸು ವರ್ಷಗಳನ್ನು ಸೂಚಿಸುತ್ತಿದ್ದುದರಿಂದ ತೆರಿಗೆದಾರರಲ್ಲಿ ಗೊಂದಲ ಉಂಟಾಗುತ್ತಿತ್ತು. 'ತೆರಿಗೆ ವರ್ಷ'ವನ್ನು ಹಿಂದಿನ ವರ್ಷ/ಹಣಕಾಸು ವರ್ಷದೊಂದಿಗೆ ಹೊಂದಾಣಿಕೆ ಮಾಡಿರುವುದರಿಂದ, ಆದಾಯ ತೆರಿಗೆ ಕಾಯ್ದೆ, 1961ರಲ್ಲಿದ್ದ ಎರಡು ವಿಭಿನ್ನ ವರ್ಷಗಳ ಉಲ್ಲೇಖದಿಂದ ಉಂಟಾಗುತ್ತಿದ್ದ ಗೊಂದಲವನ್ನು ನಿವಾರಿಸಲಾಗಿದೆ.

10. 'ತೆರಿಗೆ ವರ್ಷ'ವು 'ಹಣಕಾಸು ವರ್ಷ'ಕ್ಕಿಂತ ಕಡಿಮೆ ಅವಧಿಯದ್ದಾಗಿರಬಹುದೇ?

ಹೌದು. ಒಂದು ವ್ಯವಹಾರವನ್ನು ಯಾವುದೇ ಹಣಕಾಸು ವರ್ಷದ ಮಧ್ಯದಲ್ಲಿ ಹೊಸದಾಗಿ ಪ್ರಾರಂಭಿಸಿದಾಗ ಅಥವಾ ಆದಾಯದ ಮೂಲವು ಹಣಕಾಸು ವರ್ಷದ ಮಧ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ, 'ತೆರಿಗೆ ವರ್ಷ'ವು ಹಣಕಾಸು ವರ್ಷಕ್ಕಿಂತ ಕಡಿಮೆ ಅವಧಿಯದ್ದಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ತೆರಿಗೆ ವರ್ಷವು ವ್ಯವಹಾರವನ್ನು ಪ್ರಾರಂಭಿಸಿದ ದಿನಾಂಕದಿಂದ ಅಥವಾ ಆದಾಯದ ಮೂಲವು ಅಸ್ತಿತ್ವಕ್ಕೆ ಬಂದ ದಿನಾಂಕದಿಂದ ಆರಂಭವಾಗಿ, ಆ ಹಣಕಾಸು ವರ್ಷದ ಕೊನೆಯ ದಿನದಂದು ಅಂತ್ಯಗೊಳ್ಳುತ್ತದೆ. ಉದಾಹರಣೆಗೆ, ಒಂದು ವ್ಯವಹಾರವನ್ನು 1 ಡಿಸೆಂಬರ್ 2026ರಂದು ಪ್ರಾರಂಭಿಸಿದರೆ, ಆ ವ್ಯವಹಾರದ ತೆರಿಗೆ ವರ್ಷವು 1 ಡಿಸೆಂಬರ್ 2026ರಿಂದ 31 ಮಾರ್ಚ್ 2027ರವರೆಗೆ ಇರುತ್ತದೆ.

11. ಆದಾಯ ತೆರಿಗೆ ಕಾಯ್ದೆ, 2025ರಲ್ಲಿ 1 ಏಪ್ರಿಲ್ 2025 ಅಥವಾ ಅದಕ್ಕಿಂತ ಮುಂಚೆ ಆರಂಭವಾಗುವ "ತೆರಿಗೆ ವರ್ಷ" ಎಂದು ಉಲ್ಲೇಖಿಸಿರುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?

ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 536(3)ರ ಪ್ರಕಾರ, "ತೆರಿಗೆ ವರ್ಷ" ಎಂಬ ಯಾವುದೇ ಉಲ್ಲೇಖವನ್ನು ಹಳೆಯ ಕಾಯ್ದೆಯಲ್ಲಿನ ಅದಕ್ಕೆ ಅನುಗುಣವಾದ "ಹಿಂದಿನ ವರ್ಷ" ಎಂಬ ಉಲ್ಲೇಖವೆಂದು ಅರ್ಥಮಾಡಿಕೊಳ್ಳಬೇಕು. ಈ ವಿಧಿಯು ಪರಿವರ್ತನಾ ಉದ್ದೇಶಕ್ಕಾಗಿ ಸೇರಿಸಲ್ಪಟ್ಟಿದ್ದು, ಆ ವರ್ಷಗಳಿಗೆ ಅನ್ವಯವಾಗುವ ತೆರಿಗೆ ವಿಧಾನದ ಮೇಲೆ ಯಾವುದೇ ಬದಲಾವಣೆಯನ್ನು ಉಂಟುಮಾಡುವುದಿಲ್ಲ. ಉದಾಹರಣೆ: ಹೊಸ ಕಾಯ್ದೆಯಲ್ಲಿ 'ತೆರಿಗೆ ವರ್ಷ 2024–25' ಎಂದು ಉಲ್ಲೇಖಿಸಿದ್ದರೆ, ಅದು ಹಳೆಯ ಕಾಯ್ದೆಯಲ್ಲಿನ "ಹಿಂದಿನ ವರ್ಷ 2024–25"ಕ್ಕೆ ಸಮನಾಗಿರುತ್ತದೆ. ಅದಕ್ಕೆ ಅನುಗುಣವಾದ "ಮೌಲ್ಯಮಾಪನ ವರ್ಷ 2025–26" ಆಗಿರುತ್ತದೆ.

12. 'ತೆರಿಗೆ ವರ್ಷ' ಎಂಬ ಪರಿಕಲ್ಪನೆಯನ್ನು ಪರಿಚಯಿಸಿರುವ ಹಿನ್ನೆಲೆಯಲ್ಲಿ ವ್ಯವಹಾರಗಳ ಲೆಕ್ಕಪತ್ರ ಅವಧಿಯನ್ನು ಬದಲಾಯಿಸುವ ಅಗತ್ಯವಿದೆಯೇ?

ಇಲ್ಲ. 'ತೆರಿಗೆ ವರ್ಷ'ವನ್ನು 'ಹಣಕಾಸು ವರ್ಷ'ದೊಂದಿಗೆ ಹೊಂದಾಣಿಕೆ ಮಾಡಿರುವುದರಿಂದ, ವ್ಯವಹಾರಗಳು ಅಥವಾ ಇತರ ತೆರಿಗೆದಾರರು ತಮ್ಮ ಲೆಕ್ಕಪತ್ರ ವರ್ಷದ ಅಥವಾ ಹಣಕಾಸು ಹೇಳಿಕೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ.

13. ಅಸ್ತಿತ್ವದಲ್ಲಿರುವ ಆಡಳಿತಾತ್ಮಕ ವ್ಯವಸ್ಥೆಗಳಾದ ಶಾಶ್ವತ ಖಾತೆ ಸಂಖ್ಯೆ (PAN), ತೆರಿಗೆ ಕಡಿತ ಖಾತೆ ಸಂಖ್ಯೆ (TAN), ಮುಖರಹಿತ ಪ್ರಕ್ರಿಯೆ ಇತ್ಯಾದಿಗಳು ಆದಾಯ ತೆರಿಗೆ ಕಾಯ್ದೆ 2025ರ ಅಡಿಯಲ್ಲಿ ಮುಂದುವರಿಯುತ್ತವೆಯೇ?

ಹೌದು, ಅಸ್ತಿತ್ವದಲ್ಲಿರುವ ಶಾಶ್ವತ ಖಾತೆ ಸಂಖ್ಯೆ, ತೆರಿಗೆ ಕಡಿತ ಖಾತೆ ಸಂಖ್ಯೆ (TAN), ಮುಖರಹಿತ ಮೌಲ್ಯಮಾಪನ, ಮುಖರಹಿತ ಮೇಲ್ಮನವಿ ವ್ಯವಸ್ಥೆಗಳು ಇತ್ಯಾದಿಗಳು ಆದಾಯ ತೆರಿಗೆ ಕಾಯ್ದೆ 2025 ರ ಅಡಿಯಲ್ಲಿ ಮುಂದುವರಿಯುತ್ತವೆ.

14. ಆದಾಯ ತೆರಿಗೆ ಕಾಯ್ದೆ, 2025ವು ಆದಾಯ ತೆರಿಗೆ ಕಾಯ್ದೆ, 1961ರಿಂದ ನಿರಂತರತೆ ಮತ್ತು ಸುಗಮ ಪರಿವರ್ತನೆಯನ್ನು ಹೇಗೆ ಖಚಿತಪಡಿಸುತ್ತದೆ?

ತೆರಿಗೆ ಕಾನೂನು ವಾರ್ಷಿಕ ಅವಧಿಗಳ ಮಿತಿಯೊಳಗೆ ಮಾತ್ರ ಕಾರ್ಯನಿರ್ವಹಿಸುವುದಿಲ್ಲ. TDS, TCS, ಮುಂಗಡ ತೆರಿಗೆ ಪಾವತಿ ಇತ್ಯಾದಿಯಾದ ಕೆಲವು ಅನುಸರಣೆಗಳು ಹಣಕಾಸು ವರ್ಷದೊಳಗೆ ಪೂರ್ಣಗೊಳ್ಳುತ್ತವೆ. ಆದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ, ಮೌಲ್ಯಮಾಪನೆ, ಮರುಮೌಲ್ಯಮಾಪನೆ, ಮೇಲ್ಮನವಿಗಳು, ದಂಡಗಳು ಹಾಗೂ ಮರುಪಾವತಿಗಳಂತಹ ಇತರ ಪ್ರಕ್ರಿಯೆಗಳು ಆ ವರ್ಷದ ನಂತರವೂ, ಕೆಲವು ಸಂದರ್ಭಗಳಲ್ಲಿ ಹಲವು ವರ್ಷಗಳವರೆಗೆ ಮುಂದುವರಿಯಬಹುದು. ಆದ್ದರಿಂದ, ಹೊಸ ತೆರಿಗೆ ಕಾಯ್ದೆ ಜಾರಿಗೆ ಬಂದಾಗ, ಹಳೆಯ ಮತ್ತು ಹೊಸ ಕಾಯ್ದೆಗಳು ಒಂದು ಪರಿವರ್ತನಾ ಅವಧಿಯಲ್ಲಿ ಒಟ್ಟಿಗೆ ಜಾರಿಯಲ್ಲಿರಬೇಕಾಗುತ್ತದೆ.‌ ಆದಾಯ ತೆರಿಗೆ ಕಾಯ್ದೆ, 2025 ಈ ಪ್ರಾಯೋಗಿಕ ಅಗತ್ಯವನ್ನು ಗುರುತಿಸಿ, ಸೆಕ್ಷನ್ 536ರ ರದ್ದತಿ ಮತ್ತು ಸಂರಕ್ಷಣಾ‌ ಷರತ್ತಿನ ಮೂಲಕ ಪರಿವರ್ತನೆಯನ್ನು ನಿರ್ವಹಿಸುತ್ತದೆ. ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 536: • ವಿವಿಧ ಪರಿವರ್ತನಾ ಸಂದರ್ಭಗಳನ್ನು ನಿರ್ವಹಿಸಲು 22 ಉಪವಿಧಿಗಳನ್ನು ಒಳಗೊಂಡಿದೆ. • ಹಿಂದಿನ ವರ್ಷಗಳಿಗೆ ಸಂಬಂಧಿಸಿದಂತೆ ಹಳೆಯ ತೆರಿಗೆ ವ್ಯವಸ್ಥೆಯು ಮುಂದುವರಿಯುವುದನ್ನು ಖಚಿತಪಡಿಸುತ್ತದೆ. • ಎರಡೂ ಕಾಯ್ದೆಗಳಲ್ಲಿನ ಪರಿಭಾಷೆಗಳನ್ನು ಪರಸ್ಪರ ಹೊಂದಾಣಿಕೆ ಮಾಡುತ್ತದೆ. • ಈಗಾಗಲೇ ಸ್ಥಾಪಿತವಾಗಿರುವ ಕಾನೂನು ಸ್ಥಿತಿಗಳಿಗೆ ಯಾವುದೇ ವ್ಯತ್ಯಯ ಉಂಟುಮಾಡದೆ, ಕಾಯ್ದೆಯನ್ನು ಆಧುನೀಕರಿಸಲು ಅವಕಾಶ ನೀಡುತ್ತದೆ.

15. ವಿಭಾಗ 536ರಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಸಂರಕ್ಷಣಾ ಷರತ್ತುಗಳ ವ್ಯಾಪ್ತಿಗೆ ನೇರವಾಗಿ ಒಳಪಡದ ಕೆಲವು ಸಂದರ್ಭಗಳು ಅಥವಾ ಪರಿಸ್ಥಿತಿಗಳು ಇರಬಹುದು. ಅಂತಹ ಸಂದರ್ಭಗಳನ್ನು ನಿರ್ವಹಿಸುವಲ್ಲಿ ಯಾವುದೇ ಅನಪೇಕ್ಷಿತ ಕೊರತೆಗಳು ಉಂಟಾಗದಂತೆ ಕಾಯ್ದೆಯು ಹೇಗೆ ಖಚಿತಪಡಿಸುತ್ತದೆ?

ವಿಭಾಗ 536ರ ಉಪವಿಭಾಗ (2) ಅನ್ನು ಸಾಧ್ಯವಾದಷ್ಟು ಕಡಿಮೆ ಅನಿಶ್ಚಿತತೆ ಉಂಟಾಗುವಂತೆ ವಿಶಾಲವಾಗಿ ರೂಪಿಸಲಾಗಿದೆ. ಆದಾಗ್ಯೂ, ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 536ರ ಉಪ-ಸೆಕ್ಷನ್ (2)ರಲ್ಲಿ ನಿರ್ದಿಷ್ಟಪಡಿಸಿರುವ ಸಂದರ್ಭಗಳ ಅಡಿಯಲ್ಲಿ ನೇರವಾಗಿ ಒಳಪಡದ ಯಾವುದೇ ಅನಿರೀಕ್ಷಿತ ಪರಿಸ್ಥಿತಿಯನ್ನು ನಿರ್ವಹಿಸುವ ಉದ್ದೇಶದಿಂದ, ಉಪ-ಸೆಕ್ಷನ್ (4)ರ ಪ್ರಕಾರ ಆದಾಯ ತೆರಿಗೆ ಕಾಯ್ದೆ, 1961ರ ರದ್ದತಿಯ ಪರಿಣಾಮಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಷರತ್ತುಗಳ ಕಾಯ್ದೆ, 1897 ರ ಸೆಕ್ಷನ್‌ 6 ಅನ್ವಯವಾಗುತ್ತದೆ. ಈ ಸೆಕ್ಷನ್ ಸ್ಪಷ್ಟವಾಗಿ ಉಲ್ಲೇಖಿಸಿರುವ ಅಂಶಗಳನ್ನು ಮೀರಿ ಸಹ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಸಂರಕ್ಷಿಸುತ್ತದೆ. ಸ್ಥಾಪಿತವಾಗಿರುವ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ರಕ್ಷಿಸುವ ಸಾಮಾನ್ಯ ತತ್ವಗಳನ್ನು ಅನ್ವಯಿಸುವ ಮೂಲಕ, ಯಾವುದೇ ಅನಿರೀಕ್ಷಿತ ಸಂದರ್ಭಗಳೂ ಸಹ ಇದರ ವ್ಯಾಪ್ತಿಗೆ ಒಳಪಡುತ್ತವೆ ಎಂಬುದನ್ನು ಇದು ಖಚಿತಪಡಿಸುತ್ತದೆ.

16. 01.04.2026ರಂದು ಹೊಸ ಕಾಯ್ದೆ ಜಾರಿಗೆ ಬಂದಾಗ ಹಳೆಯ ಕಾಯ್ದೆಯ ಅಡಿಯಲ್ಲಿ ಯಾರಿಗಾದರೂ ಇದ್ದ ಹಕ್ಕು ಅಥವಾ ಪ್ರಯೋಜನವು ನಾಶವಾಗುತ್ತದೆಯೇ?

ಇಲ್ಲ. ಹಳೆಯ ಕಾಯ್ದೆಯ ಅಡಿಯಲ್ಲಿ ಉಂಟಾದ ಹಕ್ಕುಗಳು, ಪ್ರಯೋಜನಗಳು, ಬಾಧ್ಯತೆಗಳು ಅಥವಾ ಹೊಣೆಗಾರಿಕೆಗಳು ಮುಂದುವರಿಯುತ್ತವೆ. ಉದಾಹರಣೆಗೆ, ಹೊಸ ಕಾಯ್ದೆ ಜಾರಿಗೆ ಬರುವ ಮೊದಲು ಯಾವುದೇ ತೆರಿಗೆ ವರ್ಷಕ್ಕೆ ಸಂಬಂಧಿಸಿದಂತೆ ತೆರಿಗೆದಾರನಿಗೆ ಹಳೆಯ ಕಾಯ್ದೆಯ ಪ್ರಕಾರ ಮರುಪಾವತಿ ಪಡೆಯುವ ಹಕ್ಕು ಇದ್ದರೆ, ಹೊಸ ಕಾಯ್ದೆ ಜಾರಿಗೆ ಬಂದ ನಂತರವೂ ಆ ಮರುಪಾವತಿ ಪಡೆಯುವ ಹಕ್ಕು ಮುಂದುವರಿಯುತ್ತದೆ.

17. ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ನೀಡಲಾದ ಬಾಕಿ ಇರುವ ಪ್ರಕ್ರಿಯೆಗಳನ್ನು ಮತ್ತು ನೋಟಿಸುಗಳನ್ನು ಹೊಸ ಕಾಯ್ದೆ ಜಾರಿಗೆ ಬಂದ ನಂತರ ಹೇಗೆ ಪರಿಗಣಿಸಲಾಗುತ್ತವೆ?

ಹೊಸ ಕಾಯಿದೆಯ 536(2)(ಕ) ರದ್ದಾದ ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳು ಈ ಕಾಯಿದೆಯ ಪ್ರಾರಂಭದ ದಿನಾಂಕದಂದು ಬಾಕಿ ಇರುವ ಯಾವುದೇ ಪ್ರಕ್ರಿಯೆಗಳಿಗೆ ಮತ್ತು ಏಪ್ರಿಲ್ 1, 2026 ರಂದು ಅಥವಾ ನಂತರ ಪ್ರಾರಂಭಿಸಲಾದ ಯಾವುದೇ ಪ್ರಕ್ರಿಯೆಗಳಿಗೆ (ಸೂಚನೆಗಳು, ಮೌಲ್ಯಮಾಪನೆ, ಮರು-ಮೌಲ್ಯಮಾಪನೆ, ಮರು ಲೆಕ್ಕಾಚಾರ, ತಿದ್ದುಪಡಿ, ದಂಡ, ಉಲ್ಲೇಖ, ಪರಿಷ್ಕರಣೆ ಮತ್ತು ಮೇಲ್ಮನವಿಗಳು ಸೇರಿದಂತೆ) ಅನ್ವಯಿಸುವುದನ್ನು ಮುಂದುವರಿಸುತ್ತದೆ ಮತ್ತು ಅಂತಹ ಪ್ರಕ್ರಿಯೆಗಳನ್ನು ಪುನರಾವರ್ತಿತ ಆದಾಯ ತೆರಿಗೆ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಕಾರ್ಯವಿಧಾನದ ಪ್ರಕಾರ ಕೈಗೊಳ್ಳಲಾಗುತ್ತದೆ ಎಂದು ಒದಗಿಸುತ್ತದೆ. ಈ ರೀತಿಯ ಪ್ರಕ್ರಿಯೆಗಳು ರದ್ದುಗೊಂಡ ಆದಾಯ ತೆರಿಗೆ ಕಾಯ್ದೆಯಲ್ಲಿನ ವಿಧಿಗಳ ಪ್ರಕಾರವೇ ಮುಂದುವರಿಯುತ್ತವೆ. ಉದಾಹರಣೆ: ಆದಾಯ ತೆರಿಗೆ ಅಧಿಕಾರಿಯು 2024–25 ನಿರ್ಧರಣೆ ವರ್ಷದ ತೆರಿಗೆದಾರರ ಆದಾಯದ ನಿರ್ಧರಣೆಯನ್ನು ಹೊಸ ಕಾಯ್ದೆ ಜಾರಿಗೆ ಬರುವ ಮೊದಲು ಆರಂಭಿಸಿದ್ದರೆ, ಆ ಸಂಪೂರ್ಣ ಮೌಲ್ಯಮಾಪನೆ ಪ್ರಕ್ರಿಯೆ ಹಾಗೂ ಸಂಬಂಧಿತ ಇತರ ಕಾರ್ಯಗಳು ಹಳೆಯ ಕಾಯ್ದೆಯಲ್ಲಿನ ಕ್ರಮವಿಧಾನಗಳ ಪ್ರಕಾರವೇ ಮುಂದುವರಿಯುತ್ತವೆ.

18. ಹಳೆಯ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ನೀಡಲಾದ ಅನುಮೋದನೆಗಳು, ನೋಂದಣಿಗಳು ಮತ್ತು ಮಾನ್ಯತೆಗಳು ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿಯೂ ಮಾನ್ಯವಾಗಿವೆಯೇ?

ಹೌದು. ಅಂತಹ ಅನುಮೋದನೆಗಳು, ನೋಂದಣಿಗಳು ಮತ್ತು ಮಾನ್ಯತೆಗಳು ಹೊಸ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿಲ್ಲದಿದ್ದರೆ, ಅವುಗಳನ್ನು ಹೊಸ ಕಾಯ್ದೆಯ ಅಡಿಯಲ್ಲಿ ನೀಡಲಾದೆ ಎಂಬಂತೆ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಹಳೆಯ ಕಾಯ್ದೆಯ ಅಡಿಯಲ್ಲಿ ಮಾನ್ಯತೆ ಪಡೆದ ಒಂದು ದತ್ತಿ ನಿಧಿಯನ್ನು, ಹೊಸ ಕಾಯ್ದೆಯ ಸಂಬಂಧಿತ ನಿಬಂಧನೆಯ ಅಡಿಯಲ್ಲಿ ಮಾನ್ಯತೆ ಪಡೆದಂತೆಯೇ ಪರಿಗಣಿಸಲಾಗುತ್ತದೆ, ಆದರೆ ಅದು ಹೊಸ ಕಾಯ್ದೆಯ ನಿಬಂಧನೆಯೊಂದಿಗೆ ಯಾವುದೇ ಸಂಘರ್ಷದಲ್ಲಿಲ್ಲದಿದ್ದರೆ ಮಾತ್ರ.

19. ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದ ನಂತರ ತೆರಿಗೆ ಇಲಾಖೆಯಿಂದ ನೀಡಲಾದ ಹಳೆಯ ಸುತ್ತೋಲೆಗಳು, ನಿರ್ದೇಶನಗಳು ಮತ್ತು ಅಧಿಸೂಚನೆಗಳು ಮುಂದುವರಿಯುತ್ತವೆಯೇ?

ಹೌದು. ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 536(2)(j) ಪ್ರಕಾರ, ಹಳೆಯ ಕಾಯ್ದೆಯ ಅಡಿಯಲ್ಲಿ ಹೊರಡಿಸಲಾದ ಸುತ್ತೋಲೆಗಳು, ಅಧಿಸೂಚನೆಗಳು, ನಿರ್ದೇಶನಗಳು, ಅನುಮೋದನೆಗಳು ಇತ್ಯಾದಿಗಳು ಹೊಸ ಕಾಯ್ದೆಯ ವಿಧಿಗಳೊಂದಿಗೆ ವಿರುದ್ಧವಾಗಿಲ್ಲದವರೆಗೆ ಮಾನ್ಯವಾಗಿಯೇ ಮುಂದುವರಿಯುತ್ತವೆ. ಉದಾಹರಣೆ: TDS ಸಂಬಂಧಿತ ವಿಧಿಗಳು (ಹಳೆಯ ಕಾಯ್ದೆಯ ಸೆಕ್ಷನ್‌ 194C?ಹೊಸ ಕಾಯ್ದೆಯ ಸೆಕ್ಷನ್ 393). ಹಳೆಯ ಕಾಯ್ದೆಯ 194C ವಿಭಾಗದ ಅಡಿಯಲ್ಲಿ “ಕಾರ್ಯ” ಎಂಬ ಪದದ ಕುರಿತು ನೀಡಲಾದ ಸುತ್ತೋಲೆ, ಹೊಸ ಕಾಯ್ದೆಯ 2025ರ 393 ಸೆಕ್ಷನ್‌ಗೂ ಅನ್ವಯವಾಗುತ್ತದೆ, ಏಕೆಂದರೆ ಉದ್ದೇಶ ಬದಲಾಗಿಲ್ಲ.

20. ತೆರಿಗೆದಾರರು ಮತ್ತು ತೆರಿಗೆ ಅಧಿಕಾರಿಗಳ ನಡುವಿನ ನೇರ ಸಂಪರ್ಕವನ್ನು ಕಡಿಮೆ ಮಾಡಲು ರೂಪಿಸಲಾದ ಯೋಜನೆಗಳು (ಉದಾ: ಮುಖರಹಿತ ಮೌಲ್ಯಮಾಪನೆ /ಮುಖರಹಿತ ಮೇಲ್ಮನವಿ ಯೋಜನೆಗಳು) ಹಳೆಯ ಕಾಯ್ದೆಯ ಅಡಿಯಲ್ಲಿ ಇದ್ದವುಗಳು ಹೊಸ ಕಾಯ್ದೆಯಲ್ಲಿಯೂ ಮಾನ್ಯವಾಗಿವೆಯೇ?

ಹೌದು. ಅಂತಹ ಯೋಜನೆಗಳನ್ನು ಹೊಸ ಕಾಯ್ದೆಯಲ್ಲಿನ ಸಂಬಂಧಿತ ವಿಧಿಗಳ ಅಡಿಯಲ್ಲಿ ರೂಪಿಸಲಾದ ಯೋಜನೆಗಳೆಂದು ಪರಿಗಣಿಸಲಾಗುತ್ತದೆ. ಹೊಸ ಕಾಯ್ದೆಯಲ್ಲಿ ಅದಕ್ಕೆ ಅನುಗುಣವಾದ ಯಾವುದೇ ವಿಭಾಗವಿಲ್ಲದಿದ್ದರೆ, ಅಂತಹ ಯೋಜನೆಗಳನ್ನು ಹೊಸ ಕಾಯ್ದೆಯ ಸೆಕ್ಷನ್ 532ರ ಅಡಿಯಲ್ಲಿ ರೂಪಿಸಲಾದವುಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಸೆಕ್ಷನ್ 532 ಕೇಂದ್ರ ಸರ್ಕಾರಕ್ಕೆ ಅಂತಹ ಯೋಜನೆಗಳನ್ನು ರೂಪಿಸುವ ಅಧಿಕಾರವನ್ನು ನೀಡುತ್ತದೆ.‌ ಬೇರೆ ಮಾತಿನಲ್ಲಿ ಹೇಳುವುದಾದರೆ, ಪ್ರಸ್ತುತ ಜಾರಿಯಲ್ಲಿರುವ ಮುಖರಹಿತ ನಿರ್ಧರಣೆ ಯೋಜನೆಯು ಯಾವುದೇ ವ್ಯತ್ಯಯವಿಲ್ಲದೆ ಹೊಸ ಕಾಯ್ದೆಯ ಅಡಿಯಲ್ಲಿಯೂ ಮುಂದುವರಿಯುತ್ತದೆ.

21. ಹಳೆಯ ಮತ್ತು ಹೊಸ ಆದಾಯ ತೆರಿಗೆ ಕಾಯ್ದೆಗಳು ಎಷ್ಟು ಕಾಲ ಸಮಾನಾಂತರವಾಗಿ ಜಾರಿಯಲ್ಲಿರುತ್ತವೆ? ತೆರಿಗೆದಾರರಿಗೆ ಪ್ರಾಯೋಗಿಕವಾಗಿ ಇದರ ಅರ್ಥವೇನು?

01 ಏಪ್ರಿಲ್ 2026ರಿಂದ ಆದಾಯ ತೆರಿಗೆ ಕಾಯ್ದೆ, 1961 ರದ್ದುಗೊಳ್ಳುತ್ತದೆ. ಆದಾಗ್ಯೂ, 01 ಏಪ್ರಿಲ್ 2026ಕ್ಕೂ ಮೊದಲು ಆರಂಭವಾದ ಎಲ್ಲಾ ತೆರಿಗೆ ವರ್ಷಗಳಿಗೆ ಅದರ ವಿಧಿಗಳು ಅನ್ವಯವಾಗುತ್ತಲೇ ಇರುತ್ತವೆ. ಅದರಂತೆ: (i) ಆದಾಯ ತೆರಿಗೆ ಇಲಾಖೆಯ ಇ-ಸಲ್ಲಿಕೆ ಪೋರ್ಟಲ್ ಹಳೆಯ ಮತ್ತು ಹೊಸ ಎರಡೂ ಕಾಯ್ದೆಗಳ ಅಡಿಯಲ್ಲಿ ಏಕಕಾಲದಲ್ಲಿ ಅನುಸರಣೆ ಸೌಲಭ್ಯ ಒದಗಿಸುತ್ತದೆ. (ii) ಜುಲೈ 2026ರಲ್ಲಿ 2026–27ರ ಮೌಲ್ಯಮಾಪನೆ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವ ತೆರಿಗೆದಾರರು (ಹಳೆಯ ಕಾಯ್ದೆಯು ಅನ್ವಯವಾಗುವ ಅವಧಿಗೆ ಸಂಬಂಧಿಸಿದವು) ಹಳೆಯ ಕಾಯ್ದೆಯ ಅಡಿಯಲ್ಲಿ ಸೂಚಿಸಲಾದ ಫಾರ್ಮ್‌ಗಳನ್ನು ಬಳಸಿಯೇ ಸಲ್ಲಿಸಬೇಕು. ಅದೇ ಸಮಯದಲ್ಲಿ, ಜೂನ್ 2026ರಿಂದ ಪ್ರಾರಂಭವಾಗುವ ತೆರಿಗೆ ವರ್ಷ 2026–27ರ ಮುಂಗಡ ತೆರಿಗೆ ಪಾವತಿಗಳನ್ನು ಹೊಸ ಕಾಯ್ದೆಯ ಪ್ರಕಾರ ಮಾಡಬೇಕು. (iii) ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧರಣೆಗಳು, ಮೇಲ್ಮನವಿಗಳು ಮತ್ತು ಇತರ ಪ್ರಕ್ರಿಯೆಗಳು ಅಂತಿಮವಾಗಿ ಮುಕ್ತಾಯವಾಗುವವರೆಗೆ ಹಳೆಯ ಕಾಯ್ದೆಯ ಅಡಿಯಲ್ಲಿಯೇ ಮುಂದುವರಿಯುತ್ತವೆ.

22. ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್‌ 115BACರಲ್ಲಿ ನೈಸರ್ಗಿಕ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ (HUFs) ಹೊಸ ತೆರಿಗೆ ಪದ್ಧತಿಯನ್ನು ಒದಗಿಸಲಾಗಿದೆ. ಈ ಹೊಸ ತೆರಿಗೆ ಪದ್ಧತಿಯು ಆದಾಯ ತೆರಿಗೆ ಕಾಯ್ದೆ, 2025ರಲ್ಲಿಯೂ ಮುಂದುವರಿಯುತ್ತದೆಯೇ?

ಹೌದು. ಆದಾಯ ತೆರಿಗೆ ಕಾಯ್ದೆ, 2025ರಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಸೆಕ್ಷನ್‌ 202ರ ಅಡಿಯಲ್ಲಿ ಒದಗಿಸಲಾಗಿದೆ. ಇದು ನೈಸರ್ಗಿಕ ವ್ಯಕ್ತಿಗಳು, HUF, ವ್ಯಕ್ತಿಗಳ ಸಂಘ (ಸಹಕಾರ ಸಂಘವನ್ನು ಹೊರತುಪಡಿಸಿ), ವ್ಯಕ್ತಿಗಳ ಸಮೂಹ, ಅದು ಸಂಘಟಿತವಾಗಿರಲಿ ಅಥವಾ ಇಲ್ಲದಿರಲಿ, ಹಾಗೂ ಸೆಕ್ಷನ್‌ 2(77)(g)ರಲ್ಲಿ ಉಲ್ಲೇಖಿಸಲಾದ ಕೃತಕ ನ್ಯಾಯಿಕ ವ್ಯಕ್ತಿಗಳಿಗೆ ಲಭ್ಯವಿದೆ.ಹೊಸ ಕಾಯ್ದೆಯಲ್ಲಿಯೂ ಹೊಸ ತೆರಿಗೆ ಪದ್ಧತಿಯೇ ಕಡ್ಡಾಯ ತೆರಿಗೆ ಪದ್ಧತಿಯಾಗಿದ್ದು, ಅದರಿಂದ ಹೊರಗುಳಿಯುವ ಆಯ್ಕೆಯನ್ನು ತೆರಿಗೆದಾರರಿಗೆ ಒದಗಿಸಲಾಗಿದೆ.

23. ನಾನು ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದಾಯ ತೆರಿಗೆ ಕಾಯ್ದೆ, 2025ರ ಅಡಿಯಲ್ಲಿ ಅದನ್ನು ಮತ್ತೆ ಆಯ್ಕೆ ಮಾಡಬೇಕೇ?

ಇಲ್ಲ. ಹೊಸ ಕಾಯಿದೆಯ ಪ್ರಾರಂಭದ ಮೊದಲು ಜಾರಿಯಲ್ಲಿದ್ದ ಹಳೆಯ ಕಾಯಿದೆಯ ನಿಬಂಧನೆಯ ಅಡಿಯಲ್ಲಿ ಬಳಸಲಾದ ಆಯ್ಕೆಯನ್ನು ಹೊಸ ಕಾಯಿದೆಯ ಸಮಾನ ನಿಬಂಧನೆಯ ಅಡಿಯಲ್ಲಿ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

24. "ತೆರಿಗೆ ವರ್ಷ" ಎಂಬ ಪರಿಕಲ್ಪನೆಯನ್ನು ಪರಿಚಯಿಸಿರುವ ಹಿನ್ನೆಲೆಯಲ್ಲಿ ವ್ಯವಹಾರಗಳ ಲೆಕ್ಕಪತ್ರ ಅವಧಿಯನ್ನು ಬದಲಾಯಿಸುವ ಅಗತ್ಯವಿದೆಯೇ?

ಇಲ್ಲ. "ತೆರಿಗೆ ವರ್ಷ"ವನ್ನು "ಹಣಕಾಸು ವರ್ಷ"ದೊಂದಿಗೆ ಹೊಂದಾಣಿಕೆ ಮಾಡಲಾಗಿದ್ದು, ಅದು 1 ಏಪ್ರಿಲ್‌ನಿಂದ ಆರಂಭವಾಗಿ 31 ಮಾರ್ಚ್‌ಗೆ ಅಂತ್ಯಗೊಳ್ಳುವ ಒಂದು ವರ್ಷದ ಅವಧಿಯಾಗಿರುವುದರಿಂದ, ವ್ಯವಹಾರಗಳು ಅಥವಾ ಇತರ ತೆರಿಗೆದಾರರು ತಮ್ಮ ಲೆಕ್ಕಪತ್ರ ವರ್ಷದ ಅಥವಾ ಹಣಕಾಸು ಹೇಳಿಕೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ.

25. ಹೊಸ ಆದಾಯ ತೆರಿಗೆ ಕಾಯ್ದೆ, 2025ರ ನಿಬಂಧನೆಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗಿದೆ?

ಆದಾಯ ತೆರಿಗೆ ಕಾಯ್ದೆ, 1961ರ ನಿಬಂಧನೆಗಳ ಪ್ರಕಾರ, ವ್ಯವಹಾರದಿಂದ (ಸೆಕ್ಷನ್‌ 44AD), ವೃತ್ತಿಯಿಂದ (ಸೆಕ್ಷನ್‌ 44ADA) ಹಾಗೂ ಸರಕು ಸಾಗಣೆ ವಾಹನಗಳನ್ನು ಓಡಿಸುವುದು, ಬಾಡಿಗೆಗೆ ನೀಡುವುದು ಅಥವಾ ಗುತ್ತಿಗೆಗೆ ನೀಡುವ ವ್ಯವಹಾರದಿಂದ (ಸೆಕ್ಷನ್‌ 44AE) ಆದಾಯ ಗಳಿಸುವ ನಿವಾಸಿಗಳಿಗೆ ಸರಳೀಕೃತ ತೆರಿಗೆ ಪದ್ಧತಿಯನ್ನು ಒದಗಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ, 2025ರಲ್ಲಿ ಈ ಎಲ್ಲಾ ಊಹಾತ್ಮಕ ತೆರಿಗೆ ಯೋಜನೆಗಳನ್ನು ಸರಳವಾದ ಭಾಷೆಯನ್ನು ಬಳಸಿಕೊಂಡು, ಕೋಷ್ಟಕದ ರೂಪದಲ್ಲಿ ಒಂದೇ ಸೆಕ್ಷನ್‌ (ಸೆಕ್ಷನ್‌ 58) ಅಡಿಯಲ್ಲಿ ಕ್ರೋಢೀಕರಿಸಲಾಗಿದೆ.

26. ಹಳೆಯ ಕಾಯ್ದೆಯ ಅಡಿಯಲ್ಲಿ ಒಬ್ಬ ವ್ಯಕ್ತಿ ನಿರ್ದಿಷ್ಟ ತೆರಿಗೆಯನ್ನು ಆಯ್ಕೆ (ಉದಾ: ವಿಶೇಷ ತೆರಿಗೆ ಯೋಜನೆ ಆಯ್ಕೆ) ಮಾಡಿಕೊಂಡಿದ್ದರೆ, ಆ ಆಯ್ಕೆಯು ಹೊಸ ಕಾಯ್ದೆಯಲ್ಲಿಯೂ ಸ್ವಯಂಚಾಲಿತವಾಗಿ ಮುಂದುವರಿಯುತ್ತದೆಯೇ?

ಹೌದು. ಹೊಸ ಕಾಯ್ದೆಯ ಸೆಕ್ಷನ್‌ 536(2)ರ ಷರತ್ತು (f) ಸ್ಪಷ್ಟವಾಗಿ ಹೇಳುವುದೇನೆಂದರೆ, ಹೊಸ ಕಾಯ್ದೆ ಜಾರಿಗೆ ಬರುವ ತಕ್ಷಣದ ಮೊದಲು ಜಾರಿಯಲ್ಲಿದ್ದ ಹಳೆಯ ಕಾಯ್ದೆಯ ಯಾವುದೇ ನಿಬಂಧನೆಯ ಅಡಿಯಲ್ಲಿ ಬಳಸಲಾದ ಆಯ್ಕೆಯನ್ನು, ಹೊಸ ಕಾಯ್ದೆಯಲ್ಲಿನ ಸಮಾನ ನಿಬಂಧನೆಯ ಅಡಿಯಲ್ಲಿ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

27. ಹಳೆಯ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ನೀಡಲಾದ ಅನುಮೋದನೆಗಳು, ನೋಂದಣಿಗಳು ಮತ್ತು ಮಾನ್ಯತೆಗಳು ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿಯೂ ಮಾನ್ಯವಾಗಿವೆಯೇ?

ಹೌದು. ಅಂತಹ ಅನುಮೋದನೆಗಳು ಹೊಸ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿಲ್ಲದಿದ್ದರೆ, ಅವುಗಳನ್ನು ಹೊಸ ಕಾಯ್ದೆಯ ಅಡಿಯಲ್ಲಿ ನೀಡಲಾದಂತೆಯೇ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಹಳೆಯ ಕಾಯ್ದೆಯ ಅಡಿಯಲ್ಲಿ ಮಾನ್ಯತೆ ಪಡೆದ ದತ್ತಿ ನಿಧಿಯನ್ನು, ಹೊಸ ಕಾಯ್ದೆಯ ಸಂಬಂಧಿತ ನಿಬಂಧನೆಯ ಅಡಿಯಲ್ಲಿ ಮಾನ್ಯತೆ ಪಡೆದಂತೆಯೇ ಪರಿಗಣಿಸಲಾಗುತ್ತದೆ, ಆದರೆ ಅದು ಹೊಸ ಕಾಯ್ದೆಯ ನಿಬಂಧನೆಗಳಿಗೆ ಯಾವುದೇ ಸಂಘರ್ಷದಲ್ಲಿಲ್ಲದಿದ್ದರೆ ಮಾತ್ರ.

28. ಆದಾಯ ತೆರಿಗೆ ಇಲಾಖೆಯಿಂದ ಹೊರಡಿಸಲಾದ ಹಳೆಯ ಸುತ್ತೋಲೆಗಳು, ನಿರ್ದೇಶನಗಳು ಮತ್ತು ಅಧಿಸೂಚನೆಗಳು ಹೊಸ ಕಾಯ್ದೆ ಜಾರಿಗೆ ಬಂದ ನಂತರವೂ ಮುಂದುವರಿಯುತ್ತವೆಯೇ?

ಹೌದು. ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್‌ 536(2)(j)ರ ನಿಬಂಧನೆಗಳ ಪ್ರಕಾರ, ಹಳೆಯ ಕಾಯ್ದೆಯ ಅಡಿಯಲ್ಲಿ ಹೊರಡಿಸಲಾದ ಸುತ್ತೋಲೆ, ಅಧಿಸೂಚನೆ, ನಿರ್ದೇಶನ, ಅನುಮೋದನೆ ಮುಂತಾದವುಗಳು ಹೊಸ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿಲ್ಲದವರೆಗೆ ಮುಂದುವರಿಯುತ್ತವೆ.

29. 1 ಏಪ್ರಿಲ್ 2026ಕ್ಕಿಂತ ಮೊದಲು ನೀಡಲಾದ ನಿರ್ಧರಣೆ ಆದೇಶವನ್ನು ಸರಿಪಡಿಸಲು ನಿರ್ಧರಣೆ ಅಧಿಕಾರಿಗೆ ಅವಕಾಶವಿದೆಯೇ? ಹೊಸ ಕಾಯ್ದೆ ಜಾರಿಗೆ ಬಂದ ನಂತರವೂ ಇದನ್ನು ಹಳೆಯ ಕಾಯ್ದೆಯ ಅಡಿಯಲ್ಲಿ ಮುಂದುವರಿಸಬಹುದೇ?

ಹೌದು. ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 154 ರ ಅಡಿಯಲ್ಲಿ, ಆ ಕಾಯ್ದೆಯಿಂದ ನಿಯಂತ್ರಿಸಲ್ಪಡುವ ನಿರ್ಧರಣೆ ವರ್ಷಗಳಿಗೆ ಸಂಬಂಧಿಸಿದ ತಿದ್ದುಪಡಿ ಪ್ರಕ್ರಿಯೆಗಳನ್ನು 1961 ರ ಆದಾಯ ತೆರಿಗೆ ಕಾಯ್ದೆಯನ್ನು ರದ್ದುಗೊಳಿಸಿದ್ದರೂ ಸಹ, ಸದರಿ ನಿಬಂಧನೆಗಳಿಗೆ ಅನುಗುಣವಾಗಿ ಪ್ರಾರಂಭಿಸಿ ಮುಕ್ತಾಯಗೊಳಿಸಬಹುದು. ಉದಾಹರಣೆಗೆ, ಮೌಲ್ಯಮಾಪನೆ ವರ್ಷ 2023–24ರ ಮೌಲ್ಯಮಾಪನೆ ಆದೇಶದಲ್ಲಿ ದಾಖಲೆಗಳಿಂದ ಸ್ಪಷ್ಟವಾಗಿ ಕಂಡುಬರುವ ತಪ್ಪು ಹಣಕಾಸು ವರ್ಷ 2027–28ರಲ್ಲಿ ಕಂಡುಬಂದರೆ, ಆ ತಪ್ಪನ್ನು ಹಳೆಯ ಕಾಯ್ದೆಯ ನಿಬಂಧನೆಗಳ ಪ್ರಕಾರವೇ ಮೌಲ್ಯಮಾಪನೆ ಅಧಿಕಾರಿ ತಿದ್ದುಪಡಿ ಮಾಡಬಹುದು.

30. ಹಳೆಯ ಕಾಯ್ದೆಯ ಅಡಿಯಲ್ಲಿ ತೆರಿಗೆದಾರನು ನಿರ್ದಿಷ್ಟ ಲೆಕ್ಕಪತ್ರ ಅಥವಾ ಸವಕಳಿ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದರೆ, ಆ ಆಯ್ಕೆ ಹೊಸ ಕಾಯ್ದೆಯಲ್ಲಿಯೂ ಸ್ವಯಂಚಾಲಿತವಾಗಿ ಮುಂದುವರಿಯುತ್ತದೆಯೇ?

ಹೌದು. ಹೊಸ ಕಾಯ್ದೆಯಲ್ಲಿ ಅದಕ್ಕೆ ಸಮಾನ ನಿಬಂಧನೆ ಇದ್ದು ಯಾವುದೇ ವಿರೋಧಾಭಾಸ ಇಲ್ಲದಿದ್ದರೆ, ಹಳೆಯ ಕಾಯ್ದೆಯ ಅಡಿಯಲ್ಲಿ ಮಾಡಿದ ಆಯ್ಕೆಯನ್ನು ಹೊಸ ಕಾಯ್ದೆಯ ಅಡಿಯಲ್ಲಿ ಮಾಡಿದಂತೆಯೇ ಪರಿಗಣಿಸಲಾಗುತ್ತದೆ.

31. 1 ಏಪ್ರಿಲ್ 2026ರ ಮೊದಲು ಈಗಾಗಲೇ ಸಲ್ಲಿಸಲಾದ ಅರ್ಜಿಗಳಿಗೆ (ಉದಾ: ತಿದ್ದುಪಡಿ ಅಥವಾ ಪರಿಷ್ಕರಣೆ ಮನವಿಗಳು) ಏನಾಗುತ್ತವೆ?

ನಿಮ್ಮ ಅರ್ಜಿ 1 ಏಪ್ರಿಲ್ 2026ಕ್ಕಿಂತ ಮುಂಚೆ ಆರಂಭವಾದ ತೆರಿಗೆ ವರ್ಷಕ್ಕೆ ಸಂಬಂಧಿಸಿದ್ದಾದರೆ, ಅದನ್ನು ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ಮುಂದುವರಿಸಿ ಪ್ರಕ್ರಿಯೆಗೊಳಿಸಲಾಗುತ್ತದೆ. ನೀವು ಅದನ್ನು ಮತ್ತೆ ಸಲ್ಲಿಸುವ ಅಗತ್ಯವಿಲ್ಲ.

32. ಹೊಸ ಕಾಯ್ದೆ ಜಾರಿಗೆ ಬರುವ ಮೊದಲು ಹಳೆಯ ಕಾಯ್ದೆಯ ಸೆಕ್ಷನ್‌ 132ರ ಅಡಿಯಲ್ಲಿ ವ್ಯಕ್ತಿಯ ಮೇಲೆ ಶೋಧ ಆರಂಭಿಸಲಾದರೆ, ಅದರ ಸಂಬಂಧಿತ ಪ್ರಕ್ರಿಯೆಗಳಿಗೆ ಯಾವ ಕಾಯ್ದೆ ಅನ್ವಯವಾಗುತ್ತದೆ?

ಹೌದು. ಅಂತಹ ಶೋಧಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಹಳೆಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ, ಹೊಸ ಕಾಯ್ದೆ ಜಾರಿಗೆ ಬಂದಿಲ್ಲದಂತೆಯೇ ಮುಂದುವರಿಯುತ್ತವೆ. ಉದಾಹರಣೆಗೆ, 2026ರ ಜನವರಿಯಲ್ಲಿ ಶ್ರೀ. ಅ ಮೇಲೆ ಶೋಧ ಆರಂಭವಾದರೆ, ಆ ಶೋಧಕ್ಕೆ ಸಂಬಂಧಿಸಿದ ನಿರ್ಧರಣೆ ಹಾಗೂ ಇತರ ಎಲ್ಲಾ ಪ್ರಕ್ರಿಯೆಗಳು ಹಳೆಯ ಕಾಯ್ದೆಯ ನಿಬಂಧನೆಗಳ ಪ್ರಕಾರವೇ ನಿರ್ವಹಿಸಲ್ಪಡುತ್ತವೆ.

33. ಹಳೆಯ ಕಾಯ್ದೆಯ ಅಡಿಯಲ್ಲಿ ತೆರಿಗೆದಾರನು APA (ಮುಂಗಡ ಬೆಲೆ ಒಪ್ಪಂದ) ಮಾಡಿಕೊಂಡಿದ್ದರೆ, ಅದು ಹೊಸ ಕಾಯ್ದೆಯ ಅಡಿಯಲ್ಲಿ ಕೂಡ ತೆರಿಗೆದಾರ ಮತ್ತು ಇಲಾಖೆಗೆ ಬಾಧ್ಯವಾಗುತ್ತದೆಯೇ?

ಹೌದು. ಅಂತಹ ಒಪ್ಪಂದವು ಹೊಸ ಕಾಯ್ದೆಯ ಸಂಬಂಧಿತ ನಿಬಂಧನೆಗಳಿಗೆ ವಿರುದ್ಧವಾಗಿಲ್ಲದವರೆಗೆ ಮುಂದುವರಿಯುತ್ತದೆ. ಉದಾಹರಣೆಗೆ, ಕಂಪನಿ ABC FY 2024–25ರಲ್ಲಿ ನಿರ್ದಿಷ್ಟ ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ APAಗೆ ನಿಯಮಗಳು ಅದೇ ಇದ್ದರೆ, ಆ ವ್ಯವಹಾರದ ತೆರಿಗೆ ನಿರ್ಣಯವನ್ನು ಹೊಸ ಕಾಯ್ದೆಯ ಅಡಿಯಲ್ಲಿ ಕೂಡ ಅದೇ ಒಪ್ಪಂದದ ನಿಯಮಗಳ ಪ್ರಕಾರವೇ ನಿರ್ಧರಿಸಲಾಗುತ್ತದೆ.

334. ಹಳೆಯ ಕಾಯ್ದೆಯ ಅಡಿಯಲ್ಲಿ ಇರುವ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದ್ದರೆ, ಹೊಸ ಕಾಯ್ದೆ ಜಾರಿಗೆ ಬಂದ ನಂತರವೂ ಅಂತಿಮ ತೀರ್ಪು ತೆರಿಗೆ ಬಾಧ್ಯತೆಯನ್ನು ಪ್ರಭಾವಿತಗೊಳಿಸುತ್ತದೆಯೇ?

ಹೌದು. ಅಂತಿಮ ತೀರ್ಪು ಆ ಹಳೆಯ ಅವಧಿಗೆ ಸಂಬಂಧಿಸಿದಂತೆ ಹಳೆಯ ಕಾಯ್ದೆಯ ಪ್ರಕಾರವೇ ಅನ್ವಯವಾಗುತ್ತದೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ತೆರಿಗೆ ಪಾವತಿ ಅಥವಾ ಮರುಪಾವತಿ ಅದಕ್ಕೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ. ಉದಾಹರಣೆಗೆ, Company XYZಗೆ ಸಂಬಂಧಿಸಿದ ನಿರ್ಧರಣೆ ವರ್ಷ 2018–19ರ ವಿವಾದವನ್ನು ಹಣಕಾಸು ವರ್ಷ 2027–28ರಲ್ಲಿ ತೀರ್ಮಾನಿಸಿದರೂ, ಆ ತೀರ್ಪನ್ನು ಹಳೆಯ ಕಾಯ್ದೆಯ ನಿಬಂಧನೆಗಳ ಆಧಾರದ ಮೇಲೆಯೇ ಜಾರಿಗೆ ತರಲಾಗುತ್ತದೆ.

35. ಸಾಮಾನ್ಯ ತೆರಿಗೆ ತಪ್ಪಿಸುವಿಕೆ ವಿರೋಧಿ ನಿಯಮಗಳು (ʼGAARʼ) ಆದಾಯ ತೆರಿಗೆ ಕಾಯ್ದೆ, 2025ರಲ್ಲಿಯೂ ಮುಂದುವರಿಯುತ್ತವೆಯೇ?

ಹೌದು. GAAR ನಿಬಂಧನೆಗಳನ್ನು ಅದೇ ರೀತಿಯಲ್ಲಿ ಮುಂದುವರಿಸಲಾಗಿದೆ. ಮಿತಿಗಳು, ಅನುಮೋದನಾ ವ್ಯವಸ್ಥೆಗಳು ಮತ್ತು ಪ್ರಕ್ರಿಯಾತ್ಮಕ ಸುರಕ್ಷತೆಗಳು ಯಥಾಸ್ಥಿತಿಯಲ್ಲಿ ಉಳಿದಿವೆ.