1. ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ಮರುತೆರೆಯುವಿಕೆ ಸೂಚನೆ(notice) ನೀಡುವ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
ಸಂಬಂಧಿತ ತೆರಿಗೆ ವರ್ಷದ ಆದಾಯವು ಮೌಲ್ಯಮಾಪನದಿಂದ ತಪ್ಪಿಸಿಕೊಂಡಿರುವ ಸಂದರ್ಭದಲ್ಲಿ, ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 280 ರ ಅಡಿಯಲ್ಲಿ ಸೂಚನೆ(notice) ನೀಡುವ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಕೆಳಗಿನಂತೆ ವಿವರಿಸಲಾಗಿದೆ:
i) ಮಾಹಿತಿ: ತೆರಿಗೆ ಮೌಲ್ಯಮಾಪನ ಅಧಿಕಾರಿಯು ಆದಾಯವು ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದೆ ಎಂದು ಸೂಚಿಸುವ ಮಾಹಿತಿಯನ್ನು ಹೊಂದಿರಬೇಕು.
ii) ಕಾರಣ ತೋರಿಸಲು ಸೂಚನೆ (Show-cause Notice): ಕಾಯಿದೆಯ ಸೆಕ್ಷನ್ 280 ರ ಅಡಿಯಲ್ಲಿ ಸೂಚನೆ ನೀಡುವ ಮೊದಲು, ಮೌಲ್ಯಮಾಪನ ಅಧಿಕಾರಿಯು ಹೊಸ ಕಾಯಿದೆಯ ಸೆಕ್ಷನ್ 281(1) ರ ಅಡಿಯಲ್ಲಿ ಕಾರಣ ತೋರಿಸಲು ಸೂಚನೆಯನ್ನು ನೀಡುವ ಮೂಲಕ, ತೆರಿಗೆಗೆ ಒಳಪಡುವ ಆದಾಯವು ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದೆ ಎಂದು ಸೂಚಿಸುವ ಮಾಹಿತಿಯನ್ನು ಒದಗಿಸಿ, ನಿಗದಿತ ಅವಧಿಯೊಳಗೆ ಪ್ರತಿಕ್ರಿಯಿಸಲು ತೆರಿಗೆದಾರರಿಗೆ ವಿಚಾರಣೆಯ ಅವಕಾಶವನ್ನು ನೀಡಬೇಕು.
iii) ಉತ್ತರವನ್ನು ಪರಿಗಣಿಸುವುದು: ಮೌಲ್ಯಮಾಪನ ಅಧಿಕಾರಿಯು (AO) ತೆರಿಗೆದಾರರು ಸಲ್ಲಿಸಿದ ಉತ್ತರವನ್ನು ಪರಿಗಣಿಸಬೇಕು.
iv) ಕಾರಣಸಹಿತ ಆದೇಶ: ಮರುಮೌಲ್ಯಮಾಪನಕ್ಕೆ ಇದು ಸೂಕ್ತ ಪ್ರಕರಣವೇ ಎಂಬುದನ್ನು ನಿರ್ಧರಿಸಿ, ಹೆಚ್ಚುವರಿ ಆಯುಕ್ತರು ಅಥವಾ ಜಂಟಿ ಆಯುಕ್ತರ ಪೂರ್ವಾನುಮೋದನೆಯೊಂದಿಗೆ ಸೆಕ್ಷನ್ 281(3) ರ ಅಡಿಯಲ್ಲಿ ಕಾರಣಸಹಿತ ಆದೇಶವನ್ನು ಹೊರಡಿಸಬೇಕು.
v) ಕಾಯಿದೆಯ ಸೆಕ್ಷನ್ 280 ರ ಅಡಿಯಲ್ಲಿ ಮರುತೆರೆಯುವಿಕೆ ಸೂಚನೆ ನೀಡುವುದು. ಗಮನಿಸಿ: ಕಾಯಿದೆಯ ಸೆಕ್ಷನ್ 281(4) ರಲ್ಲಿ ಒದಗಿಸಿರುವ ಕೆಲವು ಸಂದರ್ಭಗಳಲ್ಲಿ, ಮೌಲ್ಯಮಾಪನ ಅಧಿಕಾರಿಯು ಸೆಕ್ಷನ್ 281 ರಲ್ಲಿ ನಿಗದಿಪಡಿಸಿರುವ ಕಾರ್ಯವಿಧಾನವನ್ನು ಅನುಸರಿಸುವ ಅಗತ್ಯವಿರುವುದಿಲ್ಲ. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿಯೂ ಸಹ, ಸೆಕ್ಷನ್ 280 ರ ಅಡಿಯಲ್ಲಿ ಸೂಚನೆಯನ್ನು ನೀಡುವ ಮೊದಲು ಹೆಚ್ಚುವರಿ ಆಯುಕ್ತರು ಅಥವಾ ಜಂಟಿ ಆಯುಕ್ತರ ಪೂರ್ವಾನುಮೋದನೆಯನ್ನು ಪಡೆಯುವುದು ಕಡ್ಡಾಯವಾಗಿದೆ.
2. ಹೊಸ ಕಾಯಿದೆಯ ಅಡಿಯಲ್ಲಿ ಮರುಮೌಲ್ಯಮಾಪನಕ್ಕಾಗಿ, ‘ಆದಾಯವು ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದೆ ಎಂದು ಸೂಚಿಸುವ ಮಾಹಿತಿ’ ಎಂದರೆ ಏನು?
ಕಾಯಿದೆಯ ಸೆಕ್ಷನ್ 280(6) ರ ಪ್ರಕಾರ, ಕೆಳಗಿನವುಗಳನ್ನು ಆದಾಯವು ಮೌಲ್ಯಮಾಪನದಿಂದ ತಪ್ಪಿಸಿಕೊಂಡಿದೆ ಎಂದು ಸೂಚಿಸುವ ಮಾಹಿತಿಯೆಂದು ಪರಿಗಣಿಸಲಾಗುತ್ತದೆ:
(i) ಸಂಬಂಧಿತ ವರ್ಷದ ಮಂಡಳಿಯ ಅಪಾಯ ನಿರ್ವಹಣಾ ಕಾರ್ಯತಂತ್ರದ ಅಡಿಯಲ್ಲಿ ಗುರುತಿಸಲಾದ ಮಾಹಿತಿ.
(ii) ಮೌಲ್ಯಮಾಪನವು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲಾಗಿಲ್ಲ ಎಂದು ಸೂಚಿಸುವ ಲೆಕ್ಕಪರಿಶೋಧನಾ ಆಕ್ಷೇಪಣೆಗಳು.
(iii) ಕಾಯಿದೆಯ ಸೆಕ್ಷನ್ 159 ರಲ್ಲಿ ಉಲ್ಲೇಖಿಸಲಾದಂತೆ, ಯಾವುದೇ ವಿದೇಶಿ ಸರ್ಕಾರ ಅಥವಾ ನಿರ್ದಿಷ್ಟ ಪ್ರದೇಶದ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಅಡಿಯಲ್ಲಿ ಸ್ವೀಕರಿಸಲಾದ ಮಾಹಿತಿ.
(iv) ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶಕ್ಕಾಗಿ ಕಾಯಿದೆಯ ಸೆಕ್ಷನ್ 260 ರ ಅಡಿಯಲ್ಲಿ ಅಧಿಸೂಚಿಸಲಾದ ಯಾವುದೇ ಯೋಜನೆಯಡಿ ಮೌಲ್ಯಮಾಪನ ಅಧಿಕಾರಿಗೆ ಲಭ್ಯವಾಗುವಂತೆ ಮಾಡಲಾದ ಮಾಹಿತಿ.
(v) ನ್ಯಾಯಮಂಡಳಿ ಅಥವಾ ನ್ಯಾಯಾಲಯದ ಆದೇಶದ ಪರಿಣಾಮವಾಗಿ ಕ್ರಮ ಕೈಗೊಳ್ಳುವ ಅಗತ್ಯವಿರುವ ಮಾಹಿತಿ.
(vi) ಕಾಯಿದೆಯ ಸೆಕ್ಷನ್ 253 ರ (ಉಪ-ಸೆಕ್ಷನ್ 4 ಅನ್ನು ಹೊರತುಪಡಿಸಿ) ಅಡಿಯಲ್ಲಿ ನಡೆಸಲಾದ ಸಮೀಕ್ಷೆಗಳಿಂದ ದೊರೆತ ಮಾಹಿತಿ.
(vii) ಸೆಕ್ಷನ್ 274(6) ರ ಅಡಿಯಲ್ಲಿ ಅನುಮೋದನಾ ಸಮಿತಿ ನೀಡಿದ ನಿರ್ದೇಶನಗಳು.
(viii) ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ನಡೆದ ಯಾವುದೇ ಪ್ರಕ್ರಿಯೆಯಲ್ಲಿ ಯಾವುದೇ ಪ್ರಾಧಿಕಾರ, ನ್ಯಾಯಮಂಡಳಿ ಅಥವಾ ನ್ಯಾಯಾಲಯ ನೀಡಿದ ಆದೇಶದಲ್ಲಿರುವ ತೀರ್ಮಾನಗಳು ಅಥವಾ ನಿರ್ದೇಶನಗಳು, ಅಥವಾ ಯಾವುದೇ ಇತರ ಕಾನೂನಿನ ಅಡಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ನ್ಯಾಯಾಲಯವು ನೀಡಿದ ಆದೇಶದಲ್ಲಿರುವ ತೀರ್ಮಾನಗಳು ಅಥವಾ ನಿರ್ದೇಶನಗಳು.
3. ಹೊಸ ಕಾಯಿದೆಯ ಸೆಕ್ಷನ್ 280 ರ ಅಡಿಯಲ್ಲಿ ತೆರಿಗೆದಾರರಿಗೆ ಸೂಚನೆ ನೀಡದೆ, ಮೌಲ್ಯಮಾಪನ ಅಧಿಕಾರಿಯು (AO) ಯಾವುದೇ ಮೌಲ್ಯಮಾಪನ, ಮರುಮೌಲ್ಯಮಾಪನ ಅಥವಾ ಮರುಲೆಕ್ಕಾಚಾರ ನಡೆಸಬಹುದೇ?
ಇಲ್ಲ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 148 ಗೆ ಅನುಗುಣವಾದ ಹೊಸ ಕಾಯಿದೆಯ ಸೆಕ್ಷನ್ 280 ರ ಅಡಿಯಲ್ಲಿ ಸೂಚನೆ ನೀಡದೆ, ಮೌಲ್ಯಮಾಪನ ಅಧಿಕಾರಿಯು (AO) ಸೆಕ್ಷನ್ 279 ರ ಅಡಿಯಲ್ಲಿ ಯಾವುದೇ ಮೌಲ್ಯಮಾಪನ, ಮರುಮೌಲ್ಯಮಾಪನ ಅಥವಾ ಮರುಲೆಕ್ಕಾಚಾರ ನಡೆಸಬಾರದು.
4. ಹೊಸ ಕಾಯಿದೆಯ ಸೆಕ್ಷನ್ 280 ರ ಅಡಿಯಲ್ಲಿ ಸೂಚನೆ ನೀಡುವ ಮೊದಲು, ಯಾವ ನಿರ್ದಿಷ್ಟ ಸಂದರ್ಭಗಳಲ್ಲಿ ಮೌಲ್ಯಮಾಪನ ಅಧಿಕಾರಿಯು ಸೆಕ್ಷನ್ 281 ರ ಅಡಿಯಲ್ಲಿ ನಿಗದಿಪಡಿಸಿರುವ ಕಾರ್ಯವಿಧಾನವನ್ನು ಅನುಸರಿಸುವ ಅಗತ್ಯವಿರುವುದಿಲ್ಲ?
ಹೊಸ ಕಾಯಿದೆಯ ನಿಬಂಧನೆಗಳ ಪ್ರಕಾರ, ಸಾಮಾನ್ಯವಾಗಿ ಮೌಲ್ಯಮಾಪನ ಅಧಿಕಾರಿಯು (AO) ಸೆಕ್ಷನ್ 281 ರಲ್ಲಿ ನಿಗದಿಪಡಿಸಿರುವ ಕಾರ್ಯವಿಧಾನವನ್ನು ಪೂರ್ಣಗೊಳಿಸಿ, ಸೆಕ್ಷನ್ 281(3) ರ ಅಡಿಯಲ್ಲಿ ಹೊರಡಿಸಿದ ಆದೇಶದೊಂದಿಗೆ ಸೆಕ್ಷನ್ 280 ರ ಅಡಿಯಲ್ಲಿ ಸೂಚನೆಯನ್ನು ನೀಡಬೇಕು. ಆದರೆ, ಈ ಕೆಳಗಿನ ಮಾಹಿತಿಯನ್ನು ಸ್ವೀಕರಿಸಿರುವ ಸಂದರ್ಭದಲ್ಲಿ ಮೌಲ್ಯಮಾಪನ ಅಧಿಕಾರಿಯು (AO) ಸೆಕ್ಷನ್ 281 ರಲ್ಲಿ ನಿಗದಿಪಡಿಸಿರುವ ಕಾರ್ಯವಿಧಾನವನ್ನು ಅನುಸರಿಸುವ ಅಗತ್ಯವಿರುವುದಿಲ್ಲ.
(i) ಹೊಸ ಕಾಯಿದೆಯ ಸೆಕ್ಷನ್ 260 ರ ಅಡಿಯಲ್ಲಿ ಅಧಿಸೂಚಿಸಲಾದ ಮುಖಾಮುಖಿಯಿಲ್ಲದ ಮಾಹಿತಿ ಸಂಗ್ರಹಣಾ ಯೋಜನೆಯಡಿ ಸ್ವೀಕರಿಸಲಾದ ಮಾಹಿತಿ; ಅಥವಾ
(ii) ಅಧ್ಯಾಯ XI ರ ನಿಬಂಧನೆಗಳ ಪ್ರಕಾರ, ಒಂದು ವ್ಯವಸ್ಥೆಯನ್ನು ಅನುಮತಿಸಲಾಗದ ತೆರಿಗೆ ತಪ್ಪಿಸುವ ವ್ಯವಸ್ಥೆ ಎಂದು ಘೋಷಿಸಿರುವ ಕಾರಣ, ಅಂತಹ ಘೋಷಣೆಯು ಅನ್ವಯವಾಗುವ ತೆರಿಗೆ ವರ್ಷ ಅಥವಾ ವರ್ಷಗಳನ್ನು ನಿರ್ದಿಷ್ಟಪಡಿಸಿ, ಸೆಕ್ಷನ್ 274(6) ರ ಅಡಿಯಲ್ಲಿ ಅನುಮೋದನಾ ಸಮಿತಿ ನೀಡಿದ ನಿರ್ದೇಶನಗಳು; ಅಥವಾ
(iii) ಈ ಕಾಯಿದೆಯ ಅಡಿಯಲ್ಲಿ ಮೇಲ್ಮನವಿ, ಉಲ್ಲೇಖ ಅಥವಾ ಮರುಪರಿಶೀಲನೆ ಪ್ರಕ್ರಿಯೆಯಲ್ಲಿ ಯಾವುದೇ ಪ್ರಾಧಿಕಾರ, ನ್ಯಾಯಮಂಡಳಿ ಅಥವಾ ನ್ಯಾಯಾಲಯ ನೀಡಿದ ಆದೇಶದಲ್ಲಿರುವ ಯಾವುದೇ ತೀರ್ಮಾನ ಅಥವಾ ನಿರ್ದೇಶನ, ಅಥವಾ ಯಾವುದೇ ಇತರ ಕಾನೂನಿನ ಅಡಿಯಲ್ಲಿ ನಡೆದ ಯಾವುದೇ ಪ್ರಕ್ರಿಯೆಯಲ್ಲಿ ನ್ಯಾಯಾಲಯವು ನೀಡಿದ ಆದೇಶದಲ್ಲಿರುವ ಯಾವುದೇ ತೀರ್ಮಾನ ಅಥವಾ ನಿರ್ದೇಶನ.
5. ಹೊಸ ಕಾಯಿದೆಯ ಮರುಮೌಲ್ಯಮಾಪನ ಸಂಬಂಧಿತ ನಿಬಂಧನೆಗಳು ಯಾವ ತೆರಿಗೆ ವರ್ಷಗಳಿಗೆ ಅನ್ವಯಿಸುತ್ತವೆ?
ಆದಾಯ ತೆರಿಗೆ ಕಾಯಿದೆ, 2025 ರ ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ನಿಬಂಧನೆಗಳು (ಸೆಕ್ಷನ್ಗಳು 279 ರಿಂದ 286) ತೆರಿಗೆ ವರ್ಷ 2026–27 ಮತ್ತು ನಂತರದ ತೆರಿಗೆ ವರ್ಷಗಳಿಗೆ ಅನ್ವಯಿಸುತ್ತವೆ. 01 ಏಪ್ರಿಲ್ 2026 ಕ್ಕಿಂತ ಮೊದಲು ಪ್ರಾರಂಭವಾಗುವ ಯಾವುದೇ ತೆರಿಗೆ ವರ್ಷಕ್ಕೆ, ಮರುಮೌಲ್ಯಮಾಪನಕ್ಕಾಗಿ ಹಳೆಯ ಕಾಯಿದೆಯ ನಿಬಂಧನೆಗಳೇ ಅನ್ವಯಿಸುತ್ತವೆ.
6. ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ಮರುಮೌಲ್ಯಮಾಪನವನ್ನು ಪೂರ್ಣಗೊಳಿಸಲು ನಿಗದಿಪಡಿಸಿರುವ ಕಾಲಮಿತಿ ಎಷ್ಟು
ಸೆಕ್ಷನ್ 286(1) [ಕೋಷ್ಟಕ: ಕ್ರಮ ಸಂಖ್ಯೆ 4] ರ ಪ್ರಕಾರ, ಸೆಕ್ಷನ್ 279 ರ ಅಡಿಯಲ್ಲಿ ಮರುಮೌಲ್ಯಮಾಪನ ಆದೇಶವನ್ನು, ಸೆಕ್ಷನ್ 280 ರ ಅಡಿಯಲ್ಲಿ ಸೂಚನೆಯನ್ನು ಜಾರಿಗೊಳಿಸಿದ ಹಣಕಾಸು ವರ್ಷದ ಅಂತ್ಯದಿಂದ ಒಂದು ವರ್ಷದೊಳಗೆ ಹೊರಡಿಸಬೇಕು. ನಿರ್ದಿಷ್ಟ ಸಂದರ್ಭಗಳಲ್ಲಿ (ಉದಾಹರಣೆಗೆ, ವರ್ಗಾವಣೆ ಬೆಲೆ ನಿಗದಿ ಸಂಬಂಧಿತ ಉಲ್ಲೇಖಗಳು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) / ನ್ಯಾಯಾಲಯದ ತಡೆಯಾಜ್ಞೆಗಳು ಇತ್ಯಾದಿ) ವಿವಿಧ ಕಾಲಾವಧಿ ವಿಸ್ತರಣೆಗಳು ಮತ್ತು ಹೊರಗಿಡುವಿಕೆಗಳು ಒದಗಿಸಲಾಗಿದೆ.
7. ಹಳೆಯ ಕಾಯಿದೆಯ ಸೆಕ್ಷನ್ 147/148 ರ ಅಡಿಯಲ್ಲಿ ಹಿಂದಿನ ಮೌಲ್ಯಮಾಪನ ವರ್ಷದ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಅದು 01.04.2026 ರ ವೇಳೆಗೆ ಬಾಕಿ ಉಳಿದಿದ್ದರೆ, ಆ ಪ್ರಕ್ರಿಯೆಯು ಹಳೆಯ ಕಾಯಿದೆಯ ಅಡಿಯಲ್ಲಿಯೇ ಮುಂದುವರಿಯುತ್ತದೆಯೇ?
ಹೌದು. ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 536(2)(c) ರಲ್ಲಿ, ಹೊಸ ಕಾಯಿದೆ ಜಾರಿಗೆ ಬಂದ ದಿನಾಂಕದಂದು ಬಾಕಿ ಇರುವ ಯಾವುದೇ ಪ್ರಕ್ರಿಯೆಗೆ ರದ್ದುಗೊಳಿಸಲಾದ ಕಾಯಿದೆಯ ನಿಬಂಧನೆಗಳೇ ಮುಂದುವರಿದು ಅನ್ವಯಿಸುತ್ತವೆ ಎಂದು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಆದ್ದರಿಂದ, ಹಳೆಯ ಕಾಯಿದೆಯ ಅಡಿಯಲ್ಲಿ ಈಗಾಗಲೇ ಆರಂಭಿಸಲಾದ ಮರುಮೌಲ್ಯಮಾಪನ ಪ್ರಕ್ರಿಯೆಗಳು ಆದಾಯ ತೆರಿಗೆ ಕಾಯಿದೆ, 1961 ರ ನಿಬಂಧನೆಗಳ ಅಡಿಯಲ್ಲಿಯೇ ಮುಂದುವರಿಯುತ್ತವೆ. ಉದಾಹರಣೆ: ಮೌಲ್ಯಮಾಪನ ಅಧಿಕಾರಿಯು ಡಿಸೆಂಬರ್ 2025 ರಲ್ಲಿ ಶ್ರೀ X ಅವರಿಗೆ ಮೌಲ್ಯಮಾಪನ ವರ್ಷ (AY) 2023–24 ಕ್ಕೆ ಸಂಬಂಧಿಸಿದಂತೆ ಹಳೆಯ ಕಾಯಿದೆಯ ಸೆಕ್ಷನ್ 148A(1) ರ ಅಡಿಯಲ್ಲಿ ಸೂಚನೆಯನ್ನು ನೀಡಿದ್ದು, ನಂತರ ಫೆಬ್ರವರಿ 2026 ರಲ್ಲಿ ಸೆಕ್ಷನ್ 148 ರ ಅಡಿಯಲ್ಲಿ ಮತ್ತೊಂದು ಸೂಚನೆಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ, ಮರುಮೌಲ್ಯಮಾಪನವು 01.04.2026 ರ ನಂತರ ಮೌಲ್ಯಮಾಪನ ಆದೇಶವನ್ನು ಹೊರಡಿಸಿದರೂ ಸಹ, ಹಳೆಯ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿಯೇ ಪೂರ್ಣಗೊಳಿಸಲಾಗುತ್ತದೆ.
8. 01.04.2026 ರ ನಂತರ, ಆದಾಯ ತೆರಿಗೆ ಇಲಾಖೆಯು ಹಿಂದಿನ ಮೌಲ್ಯಮಾಪನ ವರ್ಷಗಳಿಗೆ (ಉದಾಹರಣೆಗೆ, ಹಣಕಾಸು ವರ್ಷ 2022–23 ಅಥವಾ ಹಣಕಾಸು ವರ್ಷ 2024–25) ಸಂಬಂಧಿಸಿದಂತೆ ಹಳೆಯ ಕಾಯಿದೆಯ ಅಡಿಯಲ್ಲಿ ಹೊಸ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಬಹುದೇ?
ಹೌದು. 01 ಏಪ್ರಿಲ್ 2026 ರ ನಂತರವೂ, ಮೌಲ್ಯಮಾಪನ, ಮರುಮೌಲ್ಯಮಾಪನ, ದೋಷ ಸರಿಪಡಿಕೆ, ದಂಡ, ಮರುಪರಿಶೀಲನೆ ಮುಂತಾದ ಪ್ರಕ್ರಿಯೆಗಳನ್ನು ಮೌಲ್ಯಮಾಪನ ವರ್ಷ 2026–27 ರವರೆಗಿನ ಹಿಂದಿನ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಹಳೆಯ ಕಾಯಿದೆಯ ಅಡಿಯಲ್ಲಿಯೇ ಆರಂಭಿಸಬಹುದು ಹಾಗೂ ಪೂರ್ಣಗೊಳಿಸಬಹುದು.ಉದಾಹರಣೆ: ಹಣಕಾಸು ವರ್ಷ 2027–28 ರಲ್ಲಿ, ಆದಾಯ ತೆರಿಗೆ ಕಾಯಿದೆ, 1961 ರಲ್ಲಿ ನಿಗದಿಪಡಿಸಿರುವ ಮರುತೆರೆಯುವಿಕೆಯ ಷರತ್ತುಗಳು ಪೂರೈಸಲ್ಪಟ್ಟಿದ್ದರೆ, ಇಲಾಖೆಯು ಮೌಲ್ಯಮಾಪನ ವರ್ಷ 2023–24 ರ ಮೌಲ್ಯಮಾಪನವನ್ನು ಹಳೆಯ ಕಾಯಿದೆಯ ಅಡಿಯಲ್ಲಿ ಮರುತೆರೆಯಬಹುದು.
9. 01.04.2026 ರ ಮೊದಲು ಹಳೆಯ ಕಾಯಿದೆಯ ಸೆಕ್ಷನ್ 148A(1) ರ ಅಡಿಯಲ್ಲಿ ಸೂಚನೆ ನೀಡಲಾಗಿದ್ದರೂ, ಸೆಕ್ಷನ್ 148 ರ ಅಡಿಯಲ್ಲಿ ಸೂಚನೆಯನ್ನು ಇನ್ನೂ ನೀಡದಿದ್ದರೆ, ಅದನ್ನು 01.04.2026 ರ ನಂತರ ನೀಡಬಹುದೇ?
ಹೌದು. ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 536(2)(c) ರಲ್ಲಿ, ಹೊಸ ಕಾಯಿದೆ ಜಾರಿಗೆ ಬಂದ ದಿನಾಂಕದಂದು ಬಾಕಿ ಇರುವ ಯಾವುದೇ ಪ್ರಕ್ರಿಯೆಗೆ ರದ್ದುಗೊಳಿಸಲಾದ ಕಾಯಿದೆಯ ನಿಬಂಧನೆಗಳೇ ಮುಂದುವರಿದು ಅನ್ವಯಿಸುತ್ತವೆ ಎಂದು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಹಳೆಯ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 148A(1) ರ ಅಡಿಯಲ್ಲಿ ಸೂಚನೆ ನೀಡುವ ಮೂಲಕ ಪ್ರಕ್ರಿಯೆಯನ್ನು ಆರಂಭಿಸಲಾಗಿರುವುದರಿಂದ, ಅದರ ನಂತರದ ಎಲ್ಲಾ ಅನುಸರಣಾ ಕ್ರಮಗಳು — ಸೆಕ್ಷನ್ 148A(3) ರ ಅಡಿಯಲ್ಲಿ ಆದೇಶವನ್ನು ಹೊರಡಿಸುವುದು ಹಾಗೂ ಸೆಕ್ಷನ್ 148 ರ ಅಡಿಯಲ್ಲಿ ಸೂಚನೆಯನ್ನು ನೀಡುವುದು ಸೇರಿದಂತೆ — ಆದಾಯ ತೆರಿಗೆ ಕಾಯಿದೆ, 1961 ರ ನಿಬಂಧನೆಗಳ ಪ್ರಕಾರವೇ ನಿಯಂತ್ರಿಸಲ್ಪಡುತ್ತವೆ. ಆದರೆ, ಈ ಪ್ರಕ್ರಿಯೆಯ ಮುಂದುವರಿಕೆಗೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 149 ರಲ್ಲಿ ನಿಗದಿಪಡಿಸಿರುವ ಕಾಲಮಿತಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಉದಾಹರಣೆ: ಮೌಲ್ಯಮಾಪನ ಅಧಿಕಾರಿಯು (AO) ಮೌಲ್ಯಮಾಪನ ವರ್ಷ (AY) 2022–23 ಕ್ಕೆ ಸಂಬಂಧಿಸಿದಂತೆ 20 ಮಾರ್ಚ್ 2026 ರಂದು ತೆರಿಗೆದಾರರಿಗೆ ಸೆಕ್ಷನ್ 148A(1) ರ ಅಡಿಯಲ್ಲಿ ಕಾರಣ ತೋರಿಸುವ ಸೂಚನೆಯನ್ನು ನೀಡುತ್ತಾರೆ. ತೆರಿಗೆದಾರರ ಉತ್ತರವನ್ನು ಪರಿಗಣಿಸಿದ ನಂತರ, ಮೌಲ್ಯಮಾಪನ ಅಧಿಕಾರಿಯು 15 ಏಪ್ರಿಲ್ 2026 ರಂದು ಸೆಕ್ಷನ್ 148A(3) ರ ಅಡಿಯಲ್ಲಿ ಆದೇಶವನ್ನು ಹೊರಡಿಸಿ, 30 ಏಪ್ರಿಲ್ 2026 ರಂದು ಹಳೆಯ ಕಾಯಿದೆಯ ಸೆಕ್ಷನ್ 148 ರ ಅಡಿಯಲ್ಲಿ ಸೂಚನೆಯನ್ನು ನೀಡುತ್ತಾರೆ. ಹೊಸ ಕಾಯಿದೆಯು 01 ಏಪ್ರಿಲ್ 2026 ರಿಂದ ಜಾರಿಗೆ ಬಂದಿದ್ದರೂ ಸಹ, ಈ ಎಲ್ಲಾ ಕ್ರಮಗಳು ಮಾನ್ಯವಾಗಿರುತ್ತವೆ.
10. ಹೊಸ ಕಾಯಿದೆಯು 01.04.2026 ರಿಂದ ಜಾರಿಗೆ ಬಂದ ನಂತರ, ಮೌಲ್ಯಮಾಪನ ವರ್ಷ 2026–27 ಅಥವಾ ಅದಕ್ಕಿಂತ ಹಿಂದಿನ ಯಾವುದೇ ಮೌಲ್ಯಮಾಪನ ವರ್ಷಕ್ಕೆ ಮರುಮೌಲ್ಯಮಾಪನ ಸೂಚನೆಗಳನ್ನು ನೀಡಲು ಯಾರ ಅನುಮೋದನೆ ಅಗತ್ಯವಾಗಿರುತ್ತದೆ?
ಮೌಲ್ಯಮಾಪನ ವರ್ಷ 2026–27 ಅಥವಾ ಅದಕ್ಕಿಂತ ಹಿಂದಿನ ಯಾವುದೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಮೌಲ್ಯಮಾಪನ ಪ್ರಕ್ರಿಯೆಗಳು ಹಳೆಯ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿಯೇ ನಡೆಯುವುದರಿಂದ, ಹಳೆಯ ಕಾಯಿದೆಯ ಸೆಕ್ಷನ್ 151 ರಲ್ಲಿ ನಿಗದಿಪಡಿಸಿರುವ ಅನುಮೋದನಾ ಕ್ರಮಾನುಗತ ವ್ಯವಸ್ಥೆಯೇ ಅನ್ವಯವಾಗುತ್ತದೆ. ಆದ್ದರಿಂದ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 148 ಮತ್ತು 148A ಗಳ ಉದ್ದೇಶಕ್ಕಾಗಿ ಹೆಚ್ಚುವರಿ ಆಯುಕ್ತರು, ಹೆಚ್ಚುವರಿ ನಿರ್ದೇಶಕರು, ಜಂಟಿ ಆಯುಕ್ತರು ಅಥವಾ ಜಂಟಿ ನಿರ್ದೇಶಕರು ನಿರ್ದಿಷ್ಟ ಪ್ರಾಧಿಕಾರ ಆಗಿರುತ್ತಾರೆ.
11. ಮೌಲ್ಯಮಾಪನ ವರ್ಷ 2022–23 ಕ್ಕೆ ಸಂಬಂಧಿಸಿದಂತೆ ಹಳೆಯ ಕಾಯಿದೆಯ ಸೆಕ್ಷನ್ 148 ರ ಅಡಿಯಲ್ಲಿ ಫೆಬ್ರವರಿ 2026 ರಲ್ಲಿ ಮರುಮೌಲ್ಯಮಾಪನ ಸೂಚನೆಯನ್ನು ನೀಡಲಾಗಿದ್ದು, ತೆರಿಗೆದಾರರು ಅದಕ್ಕೆ ಪ್ರತಿಕ್ರಿಯೆಯಾಗಿ ಇನ್ನೂ ಆದಾಯದ ವಿವರವನ್ನು ಸಲ್ಲಿಸದಿದ್ದರೆ, 01.04.2026 ರ ನಂತರವೂ ಆ ಆದಾಯದ ವಿವರವನ್ನು ಸಲ್ಲಿಸಬಹುದೇ?
ಹೌದು. ಸಂಪೂರ್ಣ ಮರುಮೌಲ್ಯಮಾಪನ ಪ್ರಕ್ರಿಯೆಯು ಹಳೆಯ ಕಾಯಿದೆಯ ಅಡಿಯಲ್ಲಿಯೇ (ಸೆಕ್ಷನ್ 536(2)(c))ರ ಪ್ರಕಾರ) ನಡೆಯುವುದರಿಂದ, ತೆರಿಗೆದಾರರು ಹಳೆಯ ಕಾಯಿದೆಯ ಚೌಕಟ್ಟಿನ ಪ್ರಕಾರ ಸೆಕ್ಷನ್ 148 ರ ಅಡಿಯಲ್ಲಿನ ಸೂಚನೆಗೆ ಪ್ರತಿಕ್ರಿಯೆಯಾಗಿ ಆದಾಯದ ವಿವರವನ್ನು ಸಲ್ಲಿಸಬೇಕು. ಈ ಆದಾಯದ ವಿವರವನ್ನು, ಸೆಕ್ಷನ್ 148 ರ ಅಡಿಯಲ್ಲಿ ಸೂಚನೆಯನ್ನು ನೀಡಿದ ತಿಂಗಳ ಅಂತ್ಯದಿಂದ ಗರಿಷ್ಠ ಮೂರು ತಿಂಗಳುಗಳನ್ನು ಮೀರದಂತೆ, ಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಸಲ್ಲಿಸಬೇಕು. ಆದಾಯದ ವಿವರವನ್ನು (ITR) ಆದಾಯ ತೆರಿಗೆ ಕಾಯಿದೆ, 1961 ಕ್ಕೆ ಅನುಗುಣವಾದ ಫಾರ್ಮಿನಲ್ಲಿ ಸಲ್ಲಿಸಬೇಕು.
12. ಒಬ್ಬರೇ ತೆರಿಗೆದಾರರಿಗೆ ಸಂಬಂಧಿಸಿದಂತೆ, ಮೌಲ್ಯಮಾಪನ ಅಧಿಕಾರಿಯು ಮೌಲ್ಯಮಾಪನ ವರ್ಷ 2024–25 ಕ್ಕೆ ಹಳೆಯ ಕಾಯಿದೆಯ ಅಡಿಯಲ್ಲಿ ಮರುಮೌಲ್ಯಮಾಪನ ಹಾಗೂ ತೆರಿಗೆ ವರ್ಷ 2026–27 ಕ್ಕೆ ಹೊಸ ಕಾಯಿದೆಯ ಅಡಿಯಲ್ಲಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಒಂದೇ ಸಮಯದಲ್ಲಿ ನಡೆಸಬಹುದೇ?
ಹೌದು. ಇವು ಎರಡು ವಿಭಿನ್ನ ಆದಾಯ ಅವಧಿಗಳಿಗೆ ಸಂಬಂಧಿಸಿದ ಎರಡು ವಿಭಿನ್ನ ಕಾಯಿದೆಗಳ ಅಡಿಯಲ್ಲಿನ ಸ್ವತಂತ್ರ ಪ್ರಕ್ರಿಯೆಗಳಾಗಿವೆ. ಆದ್ದರಿಂದ, ಅಗತ್ಯವಿದ್ದಲ್ಲಿ ಇಲಾಖೆಯು ಈ ಎರಡೂ ಪ್ರಕ್ರಿಯೆಗಳನ್ನು ಸಮಾನಾಂತರವಾಗಿ ನಡೆಸಬಹುದು. ಮೌಲ್ಯಮಾಪನ ವರ್ಷ 2024–25 ಕ್ಕೆ ಸಂಬಂಧಿಸಿದ ಮರುಮೌಲ್ಯಮಾಪನ ಪ್ರಕ್ರಿಯೆಯು ಹಳೆಯ ಕಾಯಿದೆಯ ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತದೆ. ತೆರಿಗೆ ವರ್ಷ 2026–27 ಕ್ಕೆ ಸಂಬಂಧಿಸಿದ ಮೌಲ್ಯಮಾಪನ ಪ್ರಕ್ರಿಯೆಯು ಹೊಸ ಕಾಯಿದೆಯ ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತದೆ.
13. 01 ಏಪ್ರಿಲ್ 2026 ಕ್ಕಿಂತ ಮೊದಲು ಪ್ರಾರಂಭವಾಗುವ ಯಾವುದೇ ತೆರಿಗೆ ವರ್ಷಕ್ಕೆ ಸಂಬಂಧಿಸಿದ ದಂಡ ಪ್ರಕ್ರಿಯೆಗಳು ಯಾವ ಕಾಯಿದೆಯ ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತವೆ?
ಆದಾಯ ತೆರಿಗೆ ಕಾಯಿದೆ, 2025 ರ ಸೆಕ್ಷನ್ 536(2)(d) ರಲ್ಲಿ, 01 ಏಪ್ರಿಲ್ 2026 ಕ್ಕಿಂತ ಮೊದಲು ಪ್ರಾರಂಭವಾಗುವ ಯಾವುದೇ ತೆರಿಗೆ ವರ್ಷಕ್ಕೆ ಸಂಬಂಧಿಸಿದ ದಂಡ ವಿಧಿಸುವ ಪ್ರಕ್ರಿಯೆಯನ್ನು ಹಳೆಯ ಕಾಯಿದೆಯ ಅಡಿಯಲ್ಲಿಯೇ ಆರಂಭಿಸಿ, ದಂಡವನ್ನು ವಿಧಿಸಬಹುದು ಎಂದು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಹೊಸ ಕಾಯಿದೆಯು ಜಾರಿಗೆ ಬಂದಿಲ್ಲ ಎಂಬಂತೆ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಆದ್ದರಿಂದ, ಹಿಂದಿನ ವರ್ಷಗಳ ಮರುಮೌಲ್ಯಮಾಪನದಿಂದ ಉಂಟಾಗುವ ದಂಡಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಆದಾಯ ತೆರಿಗೆ ಕಾಯಿದೆ, 1961 ರಲ್ಲಿ ಒದಗಿಸಲಾದ ದಂಡ ಸಂಬಂಧಿತ ನಿಬಂಧನೆಗಳ ಪ್ರಕಾರವೇ ನಿಯಂತ್ರಿಸಲ್ಪಡುತ್ತವೆ.